ಭೂಮಿ
ಸೌರವ್ಯೂಹದಲ್ಲಿ ಸೂರ್ಯನಿಂದ ಆರೋಹೀ ದೂರಾನುಸಾರ ಮೂರನೆಯ ಗ್ರಹ; ಮಾನವ, ಸಸ್ಯ ಮತ್ತು ಪ್ರಾಣಿ ಎಂಬ ಜೀವಿಗಳ ನೆಲೆ; ವಾಯು ಮತ್ತು ಜಲಮಂಡಲಗಳಿಂದ ಪರಿವೇಷ್ಟಿತವಾಗಿರುವ ಗಟ್ಟಿ ನೆಲ. (ದಿ ಅರ್ತ್)

ಪ್ರಸಕ್ತಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ:
1. ಉಗಮ
2. ಭೂಖಂಡಗಳು
3. ಗತಿಶೀಲ ಭೂಮಿ
4. ರಚನೆ
5. ಆಕಾರ
6. ಸಾಗರ
7. ವಾಯುಮಂಡಲ
8. ಜೀವಿಗೋಳ
9. ಭೌತ ವಿವರಗಳು

1. ಉಗಮ : ಸುಮಾರು 4.6 ಬಿಲಿಯನ್ ವರ್ಷಗಳ ಹಿಂದಿನ ಘಟನೆ. ಅತಿ ವಿಸ್ತಾರವಾಗಿ, ಆದರೆ ತೀರ ವಿರಳವಾಗಿ ಹರಡಿಹೋಗಿದ್ದ ದೂಳು ಮತ್ತು ಅನಿಲ ಕಣಗಳ ಮಹಾರಾಶಿ ತೀವ್ರ ಮಂಥನ ಕ್ರಿಯೆಗೆ ಒಳಗಾಗಿತ್ತು; ಕಣಗಳು ಕಣಗಳನ್ನು ಬಡಿದುವು. ಬಡಿದು ದೂರ ರಟ್ಟಿದುವು. ಕೆಲವು ಅಂಟಿಕೊಂಡವು. ಹೀಗೆ ಈ ಕ್ರಿಯೆ ಮುಂದುವರಿದಂತೆ ಅಲ್ಲಿ ಇಲ್ಲಿ ಅನಿಲ ಮತ್ತು ದೂಳಿನ ಕಣಗಳ ಮುದ್ದೆ ಮೈದಳೆದವು-ಮೊಸರು ಕಡೆಯುವಾಗ ಬೆಣ್ಣೆ ತುಣುಕುಗಳು ಮೈದೋರುವಂತೆ.

ದ್ರವ್ಯದ ಪ್ರಕಟಿತ ಗುಣ ಗುರುತ್ವಾಕರ್ಷಣೆ. ಇದರ ಕಾರಣವಾಗಿ ಪ್ರತಿಯೊಂದು ವಸ್ತುವೂ ಇತರೆ ಎಲ್ಲ ವಸ್ತುಗಳನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಹಿರಿರಾಶಿಗೆ ಹಿರಿ ಗುರುತ್ವಬಲ. ಹೀಗೆ ಹಿರಿ ಮುದ್ದೆ ತನ್ನ ಅಧಿಕ ರಾಶಿಯ ಕಾರಣವಾಗಿ ಇನ್ನಷ್ಟು ದ್ರವ್ಯವನ್ನು ಆಕರ್ಷಿಸಿ ಮೈಗೂಡಿಸಿಕೊಂಡು ಬೆಳೆಯುತ್ತದೆ. ಈ ತೆರನಾಗಿ ಉಬ್ಬುವ ಕಾಯದ ಗರ್ಭದಲ್ಲಿ ಅತಿ ಸಂಮರ್ದ ಉಂಟಾಗಿ ಶಾಖ ಸಂಜನಿಸಿ ಪರಮಾಣುವಿಕಾಗ್ನಿ ಭುಗಿಲೇಳುತ್ತದೆ; ಅಸಂಖ್ಯ ಹೈಡ್ರೋಜನ್ ಬಾಂಬುಗಳ ಸತತ ಆಸ್ಫೋಟನೆಯಂಥ ಪರಿಸ್ಥಿತಿ. ಕಾಯವೀಗ ನಕ್ಷತ್ರವಾಗುತ್ತದೆ. ಈ ಸ್ಥಿತಿ ಬದಲಾಗದ ಕಾಯ. ಅದರ ವಲಯದಲ್ಲಿಯ ನಕ್ಷತ್ರವನ್ನು ಪರಿಭ್ರಮಿಸುವ ಮಾಂಡಲಿಕ ಕಾಯವಾಗುತ್ತದೆ. ಇದೇ ಗ್ರಹ.

ಸೌರವ್ಯೂಹ ಅಂದರೆ ಸೂರ್ಯ ಮತ್ತು ಇದನ್ನು ಪರಿವೇಷ್ಟಿಸಿರುವ ಸಮಸ್ತ ಕಾಯಗಳು, ಹೀಗೆ ಕಣಗಳ ಸಂಚಯನದಿಂದ ಏಕಕಾಲದಲ್ಲಿ ಮೈದಳೆದಿರಬೇಕೆಂದು ಸಂಚಯನವಾದ ವಿವರಿಸುತ್ತದೆ. ಆದ್ದರಿಂದ ಸೂರ್ಯನ ಒಂದು ಗ್ರಹವಾಗಿ ಭೂಮಿಯ ಉಗಮ ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಸಂಭವಿಸಿರಬೇಕು.

 ಸ್ವಂತ ರಾಶಿಯ ಕಾರಣವಾಗಿ ಉಂಟಾದ ಸಮೃದ್ಧ ಭೂಮಿಯ ಗರ್ಭದಲ್ಲಿ ಅಗಾಧ ಉಷ್ಣವನ್ನು ಉತ್ಪಾದಿಸಿತು. ಅದೇ ವೇಳೆ, ವಿಕಿರಣಪಟು ವಸ್ತುಗಳ ಕ್ಷಯದಿಂದ ಕೂಡ ಸಾಕಷ್ಟು ಉದ್ಭವಿಸಿತು. ಇವೆರಡರ ಫಲವಾಗಿ ಆದಿಮ ಭೂಮಿ ಸುಮಾರು 2,000(ಅ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ತಹತಹಿಸುವ ದ್ರವ-ಅನಿಲ ರಾಶಿಯಾಯಿತು. ಕಬ್ಬಿಣದಂಥ ಭಾರತರ ಪದಾರ್ಥಗಳು ಈ ರಾಶಿಯ ಕೇಂದ್ರದೆಡೆಗೆ ಕಂತಿದುವು. ಅಲ್ಯೂಮಿನಿಯಮಿನಂಥ ಲಘುತರ ಪದಾರ್ಥಗಳು ಮೇಲ್ಮೈಯೆಡೆಗೆ ತೇಲಿದುವು-ನಯನ ಪ್ರವಾಹದ (ಕನ್ವೆಕ್ಷನ್ ಕರೆಂಟ್) ತೀವ್ರ ಮಂಥನದಂತೆ.

ನಕ್ಷತ್ರವಲ್ಲದ ಭೂಮಿಯ ಮೇಲ್ಮೈಯಿಂದ ಉಷ್ಣವಿಕಿರಣವಾಗಿ (ರೇಡಿಯೇಷನ್) ಸೋರಿ ಹೋಯಿತು. ಭೂಮಿಯ ಆಂತರಿಕ ಉಷ್ಣ ಈ ನಷ್ಟವನ್ನು ಸಮತೋಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಮೇಲ್ಮೈ ಕ್ರಮೇಣ ತಣಿದು ದೃವೀಭವಿಸಿ ಹೆಪ್ಪುಗಟ್ಟಿತು-ಕಾಸಿದ ಹಾಲನ್ನು ಆರಲು ಬಿಟ್ಟಾಗ ಅದರ ಮೇಲ್ಮೈಯಲ್ಲಿ ಕೆನೆಗಟ್ಟುವಂತೆ. ಈ ಘನ ಪದರದಲ್ಲಿ ಮಡಿಕೆ ತಿರುಚುಗಳು, ಉಬ್ಬು ತಗ್ಗುಗಳು, ಕಣಿವೆ ಕೊರಕಲುಗಳು ಕಾಣಿಸಿಕೊಂಡವು. ಒಳಗೆ ಸೆರೆ ಸಿಕ್ಕಿಹಾಕಿಕೊಂಡಿದ್ದ ಲಾವಾರಸ, ಅನಿಲರಾಶಿ, ರಜಃಕಣಗಳು ಮುಂತಾದವುಗಳು ಅಳ್ಳಕ ಮೇಲ್ಮೈಯನ್ನು ಭೇದಿಸಿ ಹೊರಚಿಮ್ಮಿದವು. ಲಾವಾರಸ ಭೂಮಿಯ ಮೇಲೂ ಒಳಗೂ ಹರಿದು ಭೂಕಂಪನಗಳಿಗೆ ಕಾರಣವಾಯಿತು. ಮೇಲ್ಮೈಯಿಂದ ಹೊರನೆಗೆದು ಅನಿಲ ಮತ್ತು ದೂಳು ಆದಿಮ ವಾಯುಮಂಡಲವನ್ನು ರೂಪಿಸಿದವು.

ಅಂದಿನ ವಾಯುಮಂಡಲ ನೈಟ್ರೋಜನ್, ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ನೀರಿನ ತೇವ ಇವುಗಳಿಂದ ಕೂಡಿದ್ದಿರಬೇಕು. ಒಂದಿಷ್ಟು ಮಿಥೇನ್ ಮತ್ತು ಅಮೋನಿಯ ಕೂಡ ಇದ್ದಿರಬಹುದು. ತೇವ ವಾಯುಮಂಡಲದಲ್ಲಿ ಮೇಲೇರಿ ತಣಿದು ದ್ರವಿಸಿ ಮಳೆಯಾಗಿ ಮತ್ತೆ ಭೂಮಿಗೆ ಮರಳಿತು. ಆದರೆ ನೆಲ ತಲುಪುವ ಮೊದಲೇ ಇಲ್ಲಿಯ ಕುಲುಮೆ ಉಷ್ಣತೆಯ ದೆಸೆಯಿಂದ ಸೀದು ಮತ್ತೆ ಆವಿಯಾಗಿ ಮೇಲೇರಿತು. ಈ ಚಕ್ರ ಉರುಳಿದಂತೆ ಕಲ್ಲು ಬಂಡೆಗಳೂ, ಗಾರು ನೆಲಗಳೂ ಮಳೆನೀರನ್ನು ಸ್ಪಂಜಿನಂತೆ ಹೀರಿಕೊಂಡು ಜಲಭರಿತವಾದವು. ಇನ್ನೂ ಹೆಚ್ಚಿಗೆ ನೀರು ಹೀರಲಾಗದಂಥ ಪರ್ಯಾಪ್ತ ಸ್ಥಿತಿ ಐದಿದಾಗ ಭೂಮಿಯ ಮೇಲೆ ಝರಿಗಳು ದುಮುಕಿದವು, ತೊರೆಗಳು ಹರಿದವು, ನದಿಗಳು ವಕ್ರ ಪಥದಲ್ಲಿ ತೆವಳಿದವು. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಕೆರೆ-ಸರೋವರಗಳಾದವು. ವಿಶಾಲ ಬೋಗುಣಿ ಪ್ರದೇಶಗಳು ವಿಸ್ತಾರ ಜಲಾಶಯಗಳಾಗಿ ಮೊದಲ ಕಡಲುಗಳು ಮೈದಳೆದವು.

ಆ ವೇಳೆಗೆ ಮೋಡಗಳು ತೆಳುವಾದವು ಮತ್ತು ವಾಯುಮಂಡಲ ಭೂಮಿಯನ್ನು ಆವರಿಸಿದ ಅನಿಲಕವಚವಾಯಿತು. ನೀರಿನ ಮಹಾರಾಶಿಯಲ್ಲಿ ಅಲ್ಲಿ ಇಲ್ಲಿ ತಲೆಯೆತ್ತಿ ಇಣುಕುತ್ತಿದ್ದ ಶಿಲಾರಾಶಿಯಾಗಿದ್ದ ಭೂಮಿಯ ಮೇಲೆ ಸೂರ್ಯಪ್ರಕಾಶ ಸಮೃದ್ಧವಾಗಿ ಪ್ರವಹಿಸಿತು.

2 ಭೂಖಂಡಗಳು: ಇಂದು ನಾವು ತಿಳಿದಿರುವ ಏಷ್ಯಾ, ಆಫ್ರಿಕಾದಿ ಭೂಖಂಡಗಳು ಅಂದು ಇರಲಿಲ್ಲ. ಇವೆಲ್ಲವೂ ಪಾಂಗೇ (ಪ್ರಾಗ್ಭೂಮಿ) ಎಂಬ ಹೆಸರಿನ ಅಖಂಡ ಶಿಲಾರಾಶಿಯಾಗಿ ಬೆಸೆದುಕೊಂಡಿದ್ದವು. ಇದು 220 ಮಿಲಿಯನ್ ವರ್ಷಗಳ ಹಿಂದಿನ ಪರಿಸ್ಥಿತಿ.

ಸುಮಾರು 135 ಮಿಲಿಯನ್ ವರ್ಷಗಳ ಹಿಂದೆ ಪಾಂಗೇ ಖಂಡ ಒಡೆದು ಎರಡಾಯಿತು: ಉತ್ತರ ಭಾಗದ ಖಂಡ ಲೌರೇಶ್ಯ, ದಕ್ಷಿಣ ಭಾಗದ ಖಂಡ ಗೊಂಡ್ವಾನ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಈ ಖಂಡಗಳು ಮತ್ತಷ್ಟು ವಿಭಜನೆಗೊಂಡು ಅಲೆದು ಇಂದು ನಾವು ಕಾಣುವ ಭೂಖಂಡಗಳು ಅಸ್ತಿತ್ವಕ್ಕೆ ಬಂದವು. ಈ ವಿದ್ಯಮಾನಕ್ಕೆ ಖಂಡಗಳ ಅಲೆತ (ನೋಡಿ- ಖಂಡಗಳ-ಅಲೆತ) ಎಂದು ಹೆಸರು.

3 ಗತಿಶೀಲ ಭೂಮಿ: ಖಂಡಗಳ ಅಲೆತ ಸಂತತವಾದ ಒಂದು ಪ್ರಕ್ರಿಯೆ. ಭಾಗಶಃ ದ್ರವಸ್ಥಿತಿಯಲ್ಲಿರುವ ಕವಚದ (ಮ್ಯಾಂಟಲ್) ಮೇಲಿನ ತೊಗಟೆ ಫಲಕಗಳೂ (ಕ್ರಸ್ಟಲ್ ಪ್ಲೇಟ್ಸ್) ಇವುಗಳ ಮೇಲೆ ಭೂಖಂಡಗಳೂ ನೆಲಸಿವೆ. ಭೂಗರ್ಭದಿಂದ ಹೊರಹೊಮ್ಮುತ್ತಿರುವ ತೀವ್ರ ಉಷ್ಣಶಕ್ತಿಯ ಕಾರಣವಾಗಿ ಕವಚ ಮಂಥನಕ್ರಿಯೆಗೆ ಒಳಗಾಗುತ್ತದೆ. ಆಗ ಫಲಕಗಳು ಕಾರ್ಖಾನೆಯಲ್ಲಿ ಸಾಗುಪಟ್ಟಿಯ ಮೇಲೆ ಸರಿಯುವ ಸಾಮಾನು ಸರಂಜಾಮುಗಳ ತೆರದಲ್ಲಿ ಚಲಿಸತೊಡಗುತ್ತವೆ. ಇದರ ಫಲವೇ ಖಂಡಗಳ ಅಲೆತ-ವಿಸ್ತಾರ ಸಾಗರದಲ್ಲಿ ಯಾದೃಚ್ಛಿತವಾಗಿ ತೇಲುವ ಮರದ ದಿಮ್ಮಿಗಳ ಸರಿತಕ್ಕೆ ಸಂವಾದಿಯಾದ ಚಲನೆ.

ತತ್ಪರಿಣಾಮವಾಗಿ ಫಲಕಗಳು ಒಂದು ಇನ್ನೊಂದನ್ನು ಸಂಘಟಿಸುತ್ತವೆ. ಒಂದು ಇನ್ನೊಂದರ ಮೇಲೆ ಅಧಿವ್ಯಾಪಿಸುತ್ತವೆ. ಎರಡೂ ಏಕಕಾಲದಲ್ಲಿ ಮೇಲೇರುತ್ತವೆ; ಎರಡರ ನಡುವಿನ ಅಂತರ ವಿಸ್ತರಿಸುತ್ತದೆ. ಆಗ ಭೂಕಂಪನಗಳು ಸಂಭವಿಸುತ್ತವೆ. ಜ್ವಾಲಾಮುಖಿಗಳು ಹೊರನೆಗೆಯುತ್ತವೆ; ಪರ್ವತ ಶ್ರೇಣಿಗಳು ರೂಪುಗೊಳ್ಳುತ್ತವೆ. ಸಾಗರ ತಲಗಳು ವಿಶಾಲವಾಗುತ್ತವೆ. ಹೊಸ ಕೊರಕಲು ಬಿರುಕುಗಳು ಮೈದೋರುತ್ತವೆ, ಉದಾಹರಣೆಗೆ ಹಿಮಾಲಯ ಪರ್ವತ ಶ್ರೇಣಿ ಇಂದಿಗೂ ಬೆಳೆಯುತ್ತಿದೆ. ಅಟ್ಲಾಂಟಿಕ್ ಸಾಗರ ತಲದ ವಾರ್ಷಿಕವಾಗಿ ಸುಮಾರು 4ಸೆಂ.ಮೀ ಹಿಗ್ಗುತ್ತಿದ್ದರೆ, ಪೆಸಿಫಿಕ್ ಸಾಗರ ತಲದ ಅಗಲ ಸುಮಾರು ಅಷ್ಟೇ ಪ್ರಮಾಣದಲ್ಲಿ ಕುಗ್ಗುತ್ತಿದೆ.

ಭೂಮುಖವನ್ನು ಸತತವಾಗಿ ಬದಲಾಯಿಸುತ್ತಿರುವ ಇನ್ನೊಂದು ಬಲವೆಂದರೆ ವಾಯುಗುಣ (ಕ್ಲೈಮೆಟ್). ಧ್ರುವೀಯ ವಲಯಗಳಲ್ಲಿ ದಟ್ಟವಾಗಿ ಕವಿದಿರುವ ಬರ್ಫ ಸಮುಚ್ಚಯ ವಾಯುಗುಣವನ್ನು ಬಹಳವಾಗಿ ಪ್ರಭಾವಿಸುತ್ತದೆ. ಶೀತಯುಗ-ಬೆಚ್ಚಗಿನ ಯುಗ ಇವುಗಳ ನಡುವೆ ವಾಯುಗುಣ ಆಂದೋಲಿಸುತ್ತದೆ. ಕಳೆದ 200 ಮಿಲಿಯನ್ ವರ್ಷಗಳಲ್ಲಿ ಸುಮಾರು 18 ಹಿಮಯುಗಗಳು ಸಂದುಹೋಗಿವೆಯೆಂದು ಅಂದಾಜು. ಈಗ್ಗೆ ಸುಮಾರು 18 ಸಾವಿರ ವರ್ಷಗಳ ಹಿಂದೆ ಶೀತಯುಗ ತನ್ನ ಪರಾಕಾಷ್ಠೆ ಐದಿದ್ದಾಗ ಇಂದಿನ ನೆಲದ ಶೇಕಡಾ ಸುಮಾರು 30ರಷ್ಟು ಭಾಗ ನೀರಿನಡಿಯಲ್ಲಿ ಮುಳುಗಿತ್ತು.

ಧ್ರುವ ವಲಯಗಳಲ್ಲಿ ಬರ್ಫ ಕವಚ ಶಾಶ್ವತವೆಂದು ಭಾವಿಸುವುದಿದೆ. ಇದು ನಿಜವಲ್ಲ. ಇಂದು ಭೂಮಿಯ ಸರಾಸರಿ ಉಷ್ಣತೆ 14(ಅಆಗಿದ್ದು ಒಮ್ಮೆ ಅರಣ್ಯಾವೃತವಾಗಿದ್ದ ಗ್ರೀನ್‍ಲೆಂಡ್ ಈಗ ಬರ್ಫಾಚ್ಛಾದಿತವಾಗಿದೆ. ಅಂಟಾಕ್ರ್ಟಿಕಾವಂತೂ ಪೂರ್ತಿ ಬರ್ಫ ಖಂಡವೇ ಆಗಿದೆ. ಆದರೆ ಗತಯುಗಗಳಲ್ಲಿ ಸರಾಸರಿ ಉಷ್ಣತೆ 22(ಅ ಇದ್ದ ಅವಧಿಗಳಿದ್ದವು. ಆಗ ಧ್ರುವವಲಯಗಳು ಕೂಡ ಬರ್ಫಮುಕ್ತವಾಗಿದ್ದವು. ಇಂಥ ಬೆಚ್ಚಗಿನ ಯುಗ ಇನ್ನೊಮ್ಮೆ ಬಂದಾಗ ಇದೇನೂ ಅಸಂಭವನೀಯ ಘಟನೆ ಆಗಬೇಕಾಗಿಲ್ಲ-ಸಾಗರಗಳು ಉಕ್ಕಿ ಕರಾವಳಿಯ ಹಲವಾರು ಪ್ರದೇಶಗಳು ಮುಳುಗಿ ಹೋಗದಿರವು.

ಭೂಮಿಯನ್ನು ಒಂದು ಯಂತ್ರವೆಂದು ಭಾವಿಸುವುದಾದರೆ ಇದನ್ನು ಚಾಲೂ ಮಾಡುವ ಪ್ರಾಥಮಿಕ ಬಲದ ಆಕರ ಸೂರ್ಯ. ಸೌರಶಕ್ತಿಯ ಕಾರಣವಾಗಿ ವಾಯುಮಂಡಲ ಕಾದು ಮಾರುತಗಳು ಸತತ ಕ್ರಿಯಾಶೀಲವಾಗಿರುತ್ತವೆ. ಕಡಲುಗಳಿಂದ ಕಾದು ಮೇಲೇರಿದ ನೀರಿನ ಹಬೆ ಮೋಡವಾಗಿ ವಾಯುಮಂಡಲದಲ್ಲಿ ಪಸರಿಸುತ್ತದೆ. ತಣಿದ ಮೋಡ ಮಳೆಯಾಗಿ ಭೂಮಿಗೆ ಸುರಿಯುತ್ತದೆ. ಈ ನೀರು ಝರಿ ತೊರೆ ಹೊಳೆ ನದಿಗಳ ಮೂಲಕ ನೆಲ ತೊಳೆಯುತ್ತ ಹರಿದು ಕಡಲು ಸೇರಬಹುದು, ನೆಲದಡಿಗೆ ಇಮರಿ ಹೋಗಿ ಅಂತರ್ಜಲವಾಗಬಹುದು, ಶೀತ ಪ್ರದೇಶಗಳಲ್ಲಿ ಬರ್ಫ ಕವಚವಾಗಿ ಕೆನೆಗಟ್ಟಬಹುದು. ಜೀವಿಗಳ ಒಡಲಿನಲ್ಲಿಯ ಸಾರಭೂತಾಂಶವಾಗಿ ಸಂಗ್ರಹವಾಗಬಹುದು ಇತ್ಯಾದಿ.

ಹೀಗೆ ನೀರಿನ ಚಕ್ರ ಮತ್ತು ವಾಯುಮಂಡಲದ ಗತಿಶೀಲತೆ ಭೂಮಿಯ ಮುಖವನ್ನು ಸದಾ ಬದಲು ಮಾಡುತ್ತಿರುವ ಬಾಹ್ಯ ಬಲಗಳು. ಇತ್ತ ಆಂತರಿಕ ಬಲಗಳಾದ ಸಂಚಿತ ಶಾಖ, ಜ್ವಾಲಾಮುಖಿಗಳು, ಅಂತರ್ಜಲ ಪ್ರವಾಹ, ಜೀವಿ ವಿಕಾಸ ಕ್ರಿಯೆ ಮುಂತಾದವು ತಮ್ಮ ಕೊಡುಗೆಯನ್ನು ಸದಾ ಸಲ್ಲಿಸುತ್ತಲೇ ಇರುವುವು. ಸೂರ್ಯ-ವಾಯುಮಂಡಲ, ಜಲಮಂಡಲ ಈ ಹೊಂದಾಣಿಕೆಯೇ ಭೂಯಂತ್ರದ ನಿರಂತರ ಗತಿಶೀಲತೆಯ ಮರ್ಮ, ಉದಾಹರಣೆಗೆ ಚಂದ್ರನಲ್ಲಿ ವಾಯು ಅಥವಾ ಜಲಮಂಡಲಗಳಿಲ್ಲವಾಗಿ ಸೂರ್ಯಶಾಖವೊಂದರಿಂದಲೇ ವಿಶೇಷವಾಗಿ ಏನೂ ಬದಲಾವಣೆ ಕಂಡುಬರುವುದಿಲ್ಲ. ಎಂದೇ ಚಂದ್ರನ ಮೇಲೆ ಇಳಿದ ಮಾನವನಿಗೆ ಎದುರಾದದ್ದು ಘನೀಭವಿತ ಪ್ರಾಗಿತಿಹಾಸ.

4 ರಚನೆ : ಭೂಮಿಯಲ್ಲಿ ಮೂರು ವಿಭಿನ್ನ ಸ್ಥಿತಿಗಳಲ್ಲಿರುವ ಭಾಗಗಳನ್ನು ಗುರುತಿಸಲಾಗಿದೆ. ತಿರುಳು (ಕೋರ್), ಕವಚ (ಮ್ಯಾಂಟಲ್) ಮತ್ತು ತೊಗಟೆ (ಕ್ರಸ್ಟ್).

ತಿರುಳು: ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳ ಬಾನಿನಲ್ಲಿ ಆಗ ಈಗ ಬೆಳಗುವ ಜ್ವಾಲಾಜಿಹ್ವೆಗಳು (ಆರೋರ-ಧ್ರುವಜ್ಯೋತಿ) ಭೂಮಿಯ ಅಂತರಾಳದ ಬಗೆಗೆ ಮಾಹಿತಿ ನೀಡುವ ವಿದ್ಯಮಾನಗಳೆಂದರೆ ತುಸು ಅಚ್ಚರಿ ಎನ್ನಿಸಬಹುದು. ಸೂರ್ಯನಿಂದ ನಿರಂತರವಾಗಿ ಪ್ರವಹಿಸುವ ವಿದ್ಯುದಾವಿಷ್ಟ ಕಣಗಳಿಗೂ-ಈ ಪ್ರವಾಹಕ್ಕೆ ಸೌರಮಾರುತವೆಂದು (ಸೋಲಾರ್ ವಿಂಡ್) ಹೆಸರು-ಭೂಕಾಂತ ಕ್ಷೇತ್ರಕ್ಕೂ ನಡುವೆ ಸಂಘರ್ಷವಾದಾಗ ಧ್ರುವ ಪ್ರಭೆಗಳು ಸಂಜನಿಸುವುದೆಂದು ತಿಳಿದಿದೆ. ಭೂಮಿಗೆ ಈ ಕಾಂತಕ್ಷೇತ್ರ ಒದಗುವುದರ ಕಾರಣವೇನು?

ಇದಕ್ಕೆ ಭೂವಿಜ್ಞಾನಿಗಳು ನೀಡುವ ವಿವರಣೆ ಹೀಗಿದೆ: ತಿರುಳು ಸುಮಾರು 2900ಕಿ.ಮೀ. ಆಳದಿಂದ ಭೂಕೇಂದ್ರದ (6370ಕಿ.ಮೀ ಆಳ-ಇದು ಭೂಮಿಯ ಸರಾಸರಿ ತ್ರಿಜ್ಯ)ದವರೆಗೆ ವ್ಯಾಪಿಸಿದೆ. ಇದರಲ್ಲಿ ಎರಡು ಭಾಗಗಳಿವೆ. ದ್ರವಸ್ಥಿತಿಯಲ್ಲಿರುವ ಹೊರಭಾಗ, ಘನಸ್ಥಿತಿಯಲ್ಲಿರುವ ಒಳಭಾಗ. ಒಳಭಾಗದ (ಅಂದರೆ ಘನ ಒಳ ತಿರುಳಿನ) ತ್ರಿಜ್ಯ ಸುಮಾರು 1200 ಕಿ.ಮೀ, ದ್ರವಪಾಕದ ನಡುವೆ ಗಟ್ಟಿಕಾಳು ತೇಲುತ್ತಿರುವಂತೆ ಇದೆ. ಭೂಮಿಯ ತಿರುಳು. ಅಲ್ಲಿಯ ಸಂಮರ್ದ 1.3-3.5 ಮಿಲಿಯನ್ ವಾಯುಮಂಡಲಗಳಷ್ಟು ಇದೆ. (ನೆಲದ ಮೇಲಿನ ಸರಾಸರಿ ಸಂಮರ್ದದ ಅಷ್ಟುಪಾಲು ಅಧಿಕವಾಗಿದೆ ಎಂದರ್ಥ). ಉಷ್ಣತೆ 4-5 ಸಾವಿರ ಡಿಗ್ರಿ ಸೆಲ್ಸಿಯಸ್. 

ತಿರುಳಿನ ಸ್ವರೂಪವನ್ನು ಅಭ್ಯಸಿಸಲು ಒದಗುವ ಬಾಹ್ಯ ಲಕ್ಷಣವೆಂದರೆ ಭೂ ಕಾಂತ ಕ್ಷೇತ್ರ. ಭೂಮಿ ಒಂದು ಬೃಹತ್ಕಾಂತದಂತೆ ವರ್ತಿಸುತ್ತದೆ. ಇದನ್ನು ಆವರಿಸಿ ಕಾಂತಕ್ಷೇತ್ರವಿದೆ. ಈ ಕ್ಷೇತ್ರ.ದ ಧ್ರುವಗಳು ಹಲವಾರು ಬಾರಿ ತಿರುಗಾ ಮುರುಗಾ ಆಗಿರುವುವೆಂಬುದಕ್ಕೆ ಶಾಶ್ವತ ದಾಖಲೆಗಳು ದೊರೆತಿವೆ. ಭೂಮಿಯ ತಿರುಳಿನಲ್ಲಿ ಕಬ್ಬಿಣ ಸಂಯುಕ್ತ ವಿಶೇಷವಾಗಿ ಸಂಗ್ರಹವಾಗಿದ್ದು ಇದು ಅತಿ ತೀವ್ರ ಮಂಥನ ಕ್ರಿಯೆಗೆ ಪಕ್ಕಾಗಿರುವುದೇ ಇದರ ಕಾರಣವೆಂದು ವಿಜ್ಞಾನಿಗಳು ಸಾಕ್ಷ್ಯಾಧಾರ ಸಹಿತ ತರ್ಕಿಸಿದ್ದಾರೆ. ತಿರುಳು ವಿದ್ಯುಜ್ಜನಕದಂತೆ (ಡೈನಮೋ) ವರ್ತಿಸಿ ವಿದ್ಯುದುತ್ಪಾದನೆ ಮಾಡುತ್ತದೆ. ಇದಕ್ಕೆ ಭೂವಿದ್ಯುಜ್ಜನಕ ಕ್ರಿಯೆ ಎಂದು ಹೆಸರು. ತತ್ಪರಿಣಾಮವಾಗಿ ಭೂಮಿಗೆ ಕಾಂತತ್ವ ಪ್ರಾಪ್ತವಾಗಿದೆ. ತಿರುಳಿನಲ್ಲಿಯ ಕಬ್ಬಿಣ ಸಂಯುಕ್ತದ ಘಟಕ ಧಾತುಗಳು ಪ್ರಾಯಶಃ ಸಲ್ಫರ್ ಅಥವಾ ಆಕ್ಸಿಜನ್. ಆದ್ದರಿಂದ ತಿರುಳಿನ ವಸ್ತು ಕಬ್ಬಿಣ ಸಲ್ಫೈಡ್ ಇಲ್ಲವೇ ಕಬ್ಬಿಣ ಆಕ್ಸೈಡ್ ಆಗಿದ್ದು ಅದು ಸತತ ಮಂಥನ ಸ್ಥಿತಿಯಲ್ಲಿದೆ ಎಂಬುದು ಇಂದಿನ ಊಹೆ.

 ಕವಚ: ಭೂಮಿಯ ಲೋಹೀಯ ತಿರುಳನ್ನು ಆವರಿಸಿಕೊಂಡು ಸುಮಾರು 2900 ಕಿ.ಮೀ ದಪ್ಪದ ಕವಚವಿದೆ. ಧ್ರುವಗಳ ಸಂತತ ಚಲನೆಯ ಜಾಡು ಮತ್ತು ಧ್ರುವ ಜ್ಯೋತಿಗಳ ಚಿತ್ತಾಕರ್ಷಕ ದೃಶ್ಯ ಭೂತಿರುಳಿನ ಗತಿ ವೃತ್ತಾಂತದ ಪ್ರಕಟಿತ ಲಕ್ಷಣಗಳು ಹೇಗೋ ಹಾಗೆ ಭೂಖಂಡಗಳ ಹಾಗೂ ಸಾಗರಗಳ ವಿವಿಧ ವಿನ್ಯಾಸ ಭೂಕವಚದಲ್ಲಿಯ ಬದಲಾವಣೆಯ ಪರಿಣಾಮಗಳು. ಬಹುಪಾಲು ಸಿಲಿಕೇಟಿನಿಂದ ರಚಿತವಾಗಿರುವ ಕವಚ, ಅದರಲ್ಲಿರುವ ವಿಕಿರಣಪಟು ಸಮಸ್ಥಾನಿಗಳ (ರೇಡಿಯೊ ಆ್ಯಕ್ಟಿವ್ ಐಸೊಟೋಪ್ಸ್) ಕ್ಷಯದ ಕಾರಣವಾಗಿ ಶಾಖಗಳಿಸುತ್ತದೆ. ಇದು ಕಲ್ಲಿದ್ದಲ ಡಾಮರಿನಂತೆ ತನ್ಯತಾನುಗುಣವಿರುವ (ಡಕ್ಟಿಲಿಟಿ) ಸುಮಾರು 700 ಕಿ.ಮೀ. ದಪ್ಪದ ಮೇಲು ಪದರಕ್ಕೆ ಶಕ್ತಿ ಊಡಿ ಅದರಲ್ಲಿ ನಯನ ತರಂಗಗಳನ್ನು ಉತ್ಪಾದಿಸುತ್ತದೆ. ಇವು ಭೂಮಿಯ ಘನ ಮೇಲ್ಮೈಯನ್ನು ರಚಿಸಿರುವ ಫಲಕಗಳಲ್ಲಿ ಮಂದಚಲನೆಗೆ ಕಾರಣವಾಗುತ್ತವೆ. ಈ ಘನ ಮೇಲ್ಮೈಯಲ್ಲಿ ಹೆಚ್ಚಿನ ಖಂಡಗಳೂ ಸಾಗರಗಳೂ ಅಡಕವಾಗಿವೆ ಎಂಬುದನ್ನು ಗಮನಿಸಬೇಕು ಎಂದೇ ನಮಗೆ ಸುಪರಿಚಿತವಾಗಿರುವ ಭೂಪಟವನ್ನು (ಅಂದರೆ ಗೇೀಚರ ಭೂಮುಖವನ್ನು) ಕವಚದಲ್ಲಿ ತಲೆದೋರುವ ಗತ್ಯಾತ್ಮಕ ಪ್ರಕ್ರಿಯೆಗಳ ಕ್ಷಣಿಕ ವಿಹಂಗಮ ದೃಶ್ಯ ಎಂದು ವರ್ಣಿಸುವುದುಂಟು.

	ಭೂಖಂಡಗಳಿಗೂ ಸಾಗರಗಳಿಗೂ ನಡುವೆ ಮುಖ್ಯ ವ್ಯತ್ಯಾಸವಿರುವುದು ಅವುಗಳ ತೊಗಟೆಯ (ಕ್ರಸ್ಟ್) ದಪ್ಪದಲ್ಲಿ, ಖಂಡೀಯ ತೊಗಟೆಯ ದಪ್ಪ 20-70 ಕಿಮೀ ಇದ್ದರೆ ಸಾಗರೀಯ ತೊಗಟೆಯ ಸರಾಸರಿ ದಪ್ಪ 6 ಕಿಮೀ ಮಾತ್ರ. ಆದ್ದರಿಂದ ಭೂಖಂಡಗಳನ್ನೂ ಸಾಗರಗಳನ್ನೂ ಧರಿಸಿರುವ ಭೂ ಕವಚಫಲಕದ ಕನಿಷ್ಠ ದಪ್ಪ 70 ಕಿಮೀ ಆದರೂ ಇರಬೇಕೆಂದು ತರ್ಕಿಸಬಹುದು. ಆದರೆ ವಾಸ್ತವಿಕವಾಗಿ ಫಲಕದ ದಪ್ಪಕ್ಕೂ ತೊಗಟೆಯ ದಪ್ಪಕ್ಕೂ ಯಾವ ಸಂಬಂಧವೂ ಇಲ್ಲವೆಂದು ಈಗ ತಿಳಿದಿದೆ. ಎಲ್ಲ ಫಲಕಗಳೂ, ಅವು ಖಂಡೀಯ ಇಲ್ಲವೇ ಸಾಗರೀಯ ತೊಗಟೆಯಿಂದ ಆವೃತವಾಗಿರಲಿ ಆಗಿರದಿರಲಿ ಸುಮಾರು 100 ಕಿಮೀ ದಪ್ಪದವೆಂದು ಈಗ ರುಜುವಾತಾಗಿದೆ. ಈ ಫಲಕಗಳನ್ನು ರಚಿಸುವ ಪದರಕ್ಕೆ ಶಿಲಾಗೋಳವೆಂದು (ಲಿಥೊಸ್ಫಿಯರ್) ಹೆಸರು. 

	ಈ ಹಿಂದೆ ಹೇಳಿದ ನಯನ ತರಂಗಗಳು ಫಲಕಗಳ ಚಲನೆಗೆ ಕಾರಣ. ಬಿಸಿ ಪದಾರ್ಥಗಳು ಮೇಲಕ್ಕೆ ಏರುವ ಮತ್ತು ತಣ್ಣು ಪದಾರ್ಥಗಳು ಕೆಳಕ್ಕೆ ಇಳಿಯುವ ಚಲನೆ ಇದು. ಇಳಿತದ ಪರಿಣಾಮವಾಗಿ ಸಾಗರಮಧ್ಯದ ಏಣಿನಲ್ಲಿ ಹೊಸ ಫಲಕ ರೂಪುಗೊಳ್ಳುತ್ತದೆ. ಇದು ಮುಂದೆ ಕಡಲ ಕಂದಕದತ್ತ ಚಲಿಸಿದಂತೆ ತಣಿಯುತ್ತದೆ. ಅಲ್ಲಿ ಇದನ್ನು ಕಂದಕ ಸ್ವಾಹಾಕರಿಸುತ್ತದೆ. ಫಲಕ ಅದರ ಆವರಣ ವಸ್ತುವಿಗಿಂತ ಸಣ್ಣಗೂ ಸಾಂದ್ರವಾಗೂ ಇರುವುದರಿಂದ ಕ್ರಮೇಣ ಕವಚದತ್ತ ಕಂತುತ್ತದೆ. ಸಾಂದ್ರಫಲಕ ಹೀಗೆ ಕಂತಿದಾಗ ಬಿಡುಗಡೆಯಾಗುವ ಗುರುತ್ವಾತ್ಮಕಶಕ್ತಿ ತಣ್ಪು ಪದಾರ್ಥವನ್ನು ಕೆಳಕ್ಕೆ ಒಯ್ಯುತ್ತದೆ. ಇದರಿಂದ ನಯನಕೋಶವೊಂದರ (ಕನ್ವೆಕ್ಷನ್ ಸೆಲ್) ಕಂತುವ ತಣ್ಪು ಕುಳಿ ಸೃಷ್ಟಿಯಾಗುತ್ತದೆ. ನಯನ ಪರಿಚಲನೆಯ ಈ ಎರಡೂ ಅಂಶಗಳನ್ನು-ಸ್ವಾಹಾಕಾರಣ ಮತ್ತು ಮೇಲ್ಮೈಯಲ್ಲಿ ಫಲಕಗಳ ಚಲನೆ- ಪ್ರತ್ಯಕ್ಷವೀಕ್ಷಣೆಯಿಂದ ಅರಿಯಬಹುದು.

	ಕವಚವನ್ನು ರಚಿಸಿರುವ ವಸ್ತು ಬಹುತೇಕ ಸಿಲಿಕಾನ್ ಡೈಆಕ್ಸೈಡ್, ಮೆಗ್ನೀಷಿಯ್ ಆಕ್ಸೈಡ್, ಫೆರ್ರಸ್ ಆಕ್ಸೈಡ್, ಅಲ್ಯೂಮಿನಿಯಮ್ ಆಕ್ಸೈಡ್, ಕ್ಯಾಲಿಯಮ್ ಆಕ್ಸೈಡ್ ಮತ್ತು ಇತರ ಪದಾರ್ಥಗಳು. ಭೂಚರಿತ್ರೆಯ ಪ್ರಥಮಾರ್ಧದಲ್ಲಿ ಇವು ಕಾರ್ಬನೇಸಿಯಸ್ ಕಾಂಡ್ರೈಟ್ ಎಂಬ ಸಂಯುಕ್ತವಾಗಿದ್ದು ಕ್ರಮೇಣ ಪೆರಿಡೊಟೈಟ್, ಪೆರಿಡೊಟೈಟಿಕ್ ಕೊಮಟೈಟ್ ಆಗಿ ಮಾರ್ಪಾಡುಗೊಂಡು ಈಗ ಈಕ್ಲೊಗೈಟ್ ಆಗಿದೆ. 

	ಕವಚದ ಮೇಲು ಪದರದ ಗತಿವೃತ್ತಾಂತ ಈಗ ತಕ್ಕಮಟ್ಟಿಗೆ ತಿಳಿದಿದೆ. ಆದರೆ ಕೆಳಪದರದ ವರ್ತನೆ ಬಗ್ಗೆ ನಮ್ಮ e್ಞÁನ ಬಹುತೇಕ ಶೂನ್ಯ.

	ತೊಗಟೆ: ಇದರಲ್ಲಿ ಸಾಗರೀಯ ತೊಗಟೆ ಮತ್ತು ಖಂಡೀಯ ತೊಗಟೆ ಎಂದು ಎರಡು ಬಗೆಗಳುಂಟು. 

	ಸಾಗರಮಧ್ಯ ಏಣುಗಳಿಂದ ಸ್ವಾಹಾಕರಣ ವಲಯಗಳಿಗೆ (ಸಬ್ಡಕ್ಷನ್ ಝೋನ್ಸ್) ಸತತವಾಗಿ ಹರಿಯುತ್ತಿರುವ ಪ್ರವಾಹದಲ್ಲಿ ಸಾಗರೀಯ ತೊಗಟೆಯ ಸೃಷ್ಟಿಯೂ ನಾಶವೂ ಆಗುತ್ತಿವೆ. ಸ್ವಾಹಾಕರಣ ವಲಯಗಳಲ್ಲಿ ಇದು ಕವಚದಲ್ಲಿ ಐಕ್ಯವಾಗುತ್ತದೆ. ಸುಮಾರು 59,000 ಕಿಮೀ ಉದ್ದದ ಫ್ಯಾರಡೇ ಪೀಠಭೂಮಿ (ಫ್ಯಾರಡೇ ಪ್ಲ್ಯಾಟೂ) ಸಾಗರೀಯ ಏಣುಗಳಲ್ಲಿ ಮುಖ್ಯವಾದದ್ದು. ಇದು ಸಾಗರ ತಳದಲ್ಲಿ ಭೂಮಿಯನ್ನು ಮೇಖಲೆಯಂತೆ ಸುತ್ತುವರಿದಿದೆ. ತಳದಲ್ಲಿಯ ಕವಚ ಎತ್ತಿ ಹಿಡಿದಿರುವ ಎರಡು ದೃಢ ಫಲಕಗಳ ನಡುವಿನ ಗಡಿಯೇ ಏಣು. ಇಲ್ಲಿ ಫಲಕಗಳು ನಿಧಾನವಾಗಿ ಬೇರ್ಪಡುತ್ತವೆ. ಆಗ ತಳದಲ್ಲಿಯ ಶಿಲಾದ್ರವ ಈ ಖಾಲಿ ಜಾಗವನ್ನು ಭರ್ತಿ ಮಾಡಲು ಮೇಲಕ್ಕೆ ಹರಿಯುತ್ತದೆ. ಹೀಗೆ ಸಾಗರ ಮಧ್ಯ ಏಣುಗಳ ಕೊಡಿಯಲ್ಲಿ ವರ್ಷದಿಂದ ವರ್ಷಕ್ಕೆ ಒಂದಷ್ಟು ತೊಗಟೆ ಮೈದಳೆಯುತ್ತದೆ. ಇದು ಖಂಡೀಯ ತೊಗಟೆಗಿಂತ ರಚನೆಯಲ್ಲಿ ಭಿನ್ನ, ವಯಸ್ಸಿನಲ್ಲಿ ತೀರ ತರುಣ. 

	ಭೂಮಿಯ ತೊಗಟೆ ಮತ್ತು ಮೇಲು ಕವಚಗಳನ್ನು ಒಟ್ಟಾರೆ ಎರಡು ವಿಭಾಗಗಳಾಗಿ ವಿಂಗಡಿಸಿದೆ. ಮೇಲಿನದು ಶಿಲಾಗೋಳ ಅಥವಾ ಬಲಿಷ್ಠ ಪದರ. ಕೆಳಗಿನದು ಅ್ಯಸ್ಥೆನೊಸ್ಟಿಯರ್ ಅಥವಾ ದುರ್ಬಲ ಪದರ. ಶಿಲಾಗೋಳದಲ್ಲಿ ತೊಗಟೆಯ ಮೇಲು ಕವಚದ ಒಂದು ಭಾಗವೂ ಸೇರಿಕೊಂಡಿದೆ. ಸಾಗರದಲ್ಲಿ ತೊಗಟೆಯ ಸರಾಸರಿ ದಪ್ಪ 5-7 ಕಿಮೀ. ಏಣಿನ ಕೊಡಿಯಿಂದಾಚೆಗೆ ಶಿಲಾಗೋಳದ ದಪ್ಪ ಸುಮಾರು 100 ಕಿಮೀ. ಇದು ಅಸಂಖ್ಯ ದೃಢ ಫಲಕಗಳಾಗಿ ಒಡೆದು ಹೋಗಿದೆ. ಇವು ಅಷ್ಟೊಂದು ದೃಢವಲ್ಲದ ದುರ್ಬಲ ಪದರದ ಮೇಲೆ ತೇಲುತ್ತಿರುವ ತೆಪ್ಪಗಳಂತಿವೆ.

	ಈ ತೆಪ್ಪಗಳು (ಫಲಕಗಳು) ವಾರ್ಷಿಕವಾಗಿ ಒಂದನ್ನು ಕುರಿತಂತೆ ಇನ್ನೊಂದು ಕೆಲವು ಸೆಂಟಿಮೀಟರುಗಳಷ್ಟು ಸರಿಯುತ್ತವೆ. ಹೀಗಾಗಿ ಮೂರು ಬಗೆಯ ಗಡಿಗಳು ಮೈದಳೆಯುವುವು: ಅಭಿಸರಣ ಗಡಿಗಳು, ಅಪಸರಣಗಡಿಗಳು, ಪರಿವರ್ತಕ ಗಡಿಗಳು ಮೊದಲಿನವಲ್ಲಿ ಫಲಕಗಳು ದೂರದೂರಹೋಗುವುವು ಉದಾಹರಣೆಗೆ ಸಾಗರಮಧ್ಯದ ಏಣಿನ ವಿಸ್ತರಿಸುತ್ತಿರುವ ನಡುಭಾಗ. ಇಲ್ಲಿ ದ್ರವಶಿಲೆ ಕವಚದಿಂದ ತೊಗಟೆಗೆ ಪ್ರವಹಿಸಿಸುತ್ತಿರುವುದು. ಎರಡನೆಯವಲ್ಲಿ ಫಲಕಗಳು ಹತ್ತಿರ ಹತ್ತಿರ ಸರಿದು ಒಂದು ಇನ್ನೊಂದರ ತಳದಲ್ಲಿ ಒಳನುಗ್ಗಿ ದುರ್ಬಲ ಪದರವನ್ನು ಪ್ರವೇಶಿಸುತ್ತವೆ. ಈ ಪ್ರಕ್ರಿಯೆಯನ್ನು ಸ್ವಾಹಾಕರಣವೆಂದು ಹಿಂದೆ ವಿವರಿಸಿದೆ. ಪರಿವರ್ತಕ ಗಡಿಗಳಲ್ಲಿ (ಟ್ರಾನ್ಸ್‍ಫಾರ್ಮ್ ಬೌಂಡರೀಸ್) ಫಲಕಗಳು ಒಂದರ ಮೇಲೊಂದು ಸಲೀಸಾಗಿ ಜಾರುತ್ತವೆ.

	ಖಂಡೀಯ ತೊಗಟೆ ಸಾಗರೀಯ ತೊಗಟೆಗಿಂತ ಪ್ರಾಚೀನವಾದದ್ದು. ಕೆಲವೆಡೆಗಳಲ್ಲಿ ಇದರ ವಯಸ್ಸು ಹತ್ತಿರ ಹತ್ತಿರ 4 ಬಿಲಿಯನ್ ವರ್ಷಗಳೇ ಇರಬಹುದು (ಭೂಮಿಯ ವಯಸ್ಸು 4.6 ಬಿಲಿಯನ್ ವರ್ಷಗಳು). ಹಾಗಿದ್ದರೂ ಇದು ಭೂವ್ಯಾಪಾರಗಳ ಕಾರಣವಾಗಿ ಸಂತತ ವ್ಯತ್ಯಾಸಕ್ಕೆ ಈಡಾಗುತ್ತದೆ: ಫಲಕ ಚಲನೆ, ಜ್ವಾಲಾಮುಖಿ ಪ್ರಹಾರ, ಸವಕಳಿ ಮತ್ತು ಅವಸಾದನ. ಈಗ್ಗೆ ಸುಮಾರು 200 ವರ್ಷಗಳಿಂದ ಭೂವಿe್ಞÁನಿಗಳು ಖಂಡಗಳ ಭೂವೈe್ಞÁನಿಕ ವೃತ್ತಾಂಶವನ್ನು ಅಧ್ಯಯನಗೈಯುತ್ತ ಬಂದಿದ್ದಾರೆ. ಭೂಚರಿತ್ರೆಯ ಪುನಾರಚನೆ ಅವರ ಉದ್ದೇಶ. ಆದರೆ ಇದೊಂದು ಅಪರಿಹಾರ್ಯ ಸಮಸ್ಯೆ ಎನಿಸುವಷ್ಟು ಅಗಾಧವಾದದ್ದು. ಏಕೆಂದರೆ ಸಾಗರೀಯ ತೊಗಟೆಯ ಸೃಷ್ಟಿ ಅತಿ ಶೀಘ್ರವಾಗಿ ಆಗುತ್ತದೆ; ಅದರ ಹ್ರಸ್ವ ಜೀವಿತಾವಧಿಯಲ್ಲಿ ಅದರ ಹೆಚ್ಚು ಭಾಗ ವಿರೂಪಗೊಳ್ಳದೆ ಉಳಿದಿದ್ದು ಮುಂದೆ ಅತಿ ಶೀಘ್ರವಾಗಿ ನಾಶವಾಗಿ ಹೋಗುತ್ತದೆ. ಕಡಲ ದೋಣಿಗಳಲ್ಲಿಯ ಅತ್ಯಂತ ಪ್ರಾಚೀನ ತೊಗಟೆಯ ವಯಸ್ಸು 200 ಮಿಲಿಯನ್ ವರ್ಷಗಳಿಗಿಂತ ಕಡಿಮೆ. ಇದಕ್ಕೆ ವೈದೃಶ್ಯವಾಗಿ ಖಂಡೀಯ ತೊಗಟೆ ಅತಿದೀರ್ಘಕಾಲ ಸ್ಥಿರವಾಗಿರುವುದು. ಸಾಗರದಲ್ಲಿ ತೊಗಟೆಯ ಸೃಷ್ಟಿ ಆಗುವ ರೀತಿಯೇ ಬೇರೆ. ಖಂಡಗಳಲ್ಲಿ ಆಗುವ ರೀತಿಯೇ ಬೇರೆ. ಇಲ್ಲಿ ಹಲವು ಬಗೆಯ ಭೌತ ಹಾಗೂ ರಾಸಾಯನಿಕ ಬಲಗಳು ವರ್ತಿಸಿ ಸಂಕೀರ್ಣ ತೊಗಟೆಯ ನಿರ್ಮಾಣ ಆಗುವುದು. ಇದರಲ್ಲಿ ಭೂವ್ಯಾಪಾರಗಳ ಕಾರಣವಾಗಿ ಆಗುವ ಬದಲಾವಣೆಗಳು ಅಸಂಖ್ಯ. ಉದಾಹರಣೆಗೆ ಸಾವಿರಾರು ಕಿಲೋಮೀಟರ್ ಉದ್ದ ಹರಡಿಹೋಗಿರುವ ನೂರಾರು ಕಿಲೋಮೀಟರ್ ಅಗಲದ ಶಿಲಾ ಮೇಖಲೆಗಳನ್ನು ಅಗ್ನಿಶಿಲೆಗಳು ಆಕ್ರಮಿಸಿ ತಿರುಚಿ ಅಲ್ಲಿ ಸ್ಥಳೀಯ ಅವಸಾದನ ಶಿಲೆಗಳನ್ನು ನಿರ್ಮಿಸುವುದು ವಿರಳವಲ್ಲ.

	ಹೀಗೆ ಖಂಡೀಯ ತೊಗಟೆ ಭೂಚರಿತ್ರೆಯ ವಿವರಗಳನ್ನು ಆಂಶಿಕವಾಗಿಯಾದರೂ ಒದಗಿಸುವ ಒಂದು ಸಂಕೀರ್ಣ ದಾಖಲೆ.

	ಖಂಡೀಯ ತೊಗಟೆ ಖಂಡಗಳ ಮೇಲ್ಮೈಯನ್ನು ವ್ಯಾಪಿಸಿ ಸಾಗರದ ಅಂಚಿನವರೆಗೂ ಚಾಚಿರುವುದು. ಒಟ್ಟಾರೆ ಇದು ಭೂಮಿಯ ಮೇಲ್ಮೈಯ ಶೇಕಡಾ ಸುಮಾರು 45 ಭಾಗದಷ್ಟು ವ್ಯಾಪಿಸಿದೆ. ಆದರೆ ಇದರ ರಾಶಿ ಭೂರಾಶಿಯ ಶೇಕಡಾ 0.3 ಮಾತ್ರ. ಸಾಗರೀಯ ತೊಗಟೆ ಬಹುತೇಕ ಅಗ್ನಿಶಿಲಾ ಬಸಾಲ್ಟಿನಿಂದ ಕೂಡಿದ್ದರೆ ಖಂಡೀಯ ತೊಗಟೆ ಅಗ್ನಿಜನ್ಯ ರೂಪಾಂತರಿತ ಮತ್ತು ಅವಸಾದನ ಶಿಲೆಗಳ ಸಂಚಯ. ಇದರಲ್ಲಿ ಪೊಟಾಸಿಯಮ್, ಯುರೇನಿಯಮ್, ತೋರಿಯಮ್ ಮತ್ತು ಸಿಲಿಕಾನ್ ಧಾತುಗಳು ಸಮೃದ್ಧವಾಗಿವೆ.

5. ಆಕಾರ: ಭೂಮಿ ವಾಯುಮಂಡಲದಲ್ಲಿ ಮುಕ್ತವಾಗಿ ತೇಲುತ್ತಿದೆ. ನೇಸರುಮೂಡುವ ಮುನ್ನ ನಸುಕು ಹರಿಯುತ್ತದೆ ಎಂದು ಮುಂತಾಗಿ ಋಗ್ವೇದದಲ್ಲಿ (ಕ್ರಿ.ಪೂ.1500) ಬರುವ ಪ್ರಾಸಂಗಿಕ ವರ್ಣನೆಗಳಿಂದ ಅಂದಿನ ಭಾರತೀಯರಿಗೆ ಭೂಮಿಯ ಗೋಳಾಕಾರತ್ವದ ಹೊಳಹು ಮಿನುಗಿತ್ತೆಂದು ಊಹಿಸಬಹುದು. ಈ ಊಹೆಗೆ ಆಧಾರವಾಗಿ ಏನಾದರೂ ಪ್ರಾಯೋಗಿಕ ಸಮರ್ಥನೆ ಇತ್ತೇ ಇರಲಿಲ್ಲವೇ ತಿಳಿದಿಲ್ಲ. 

	ಗ್ರೀಕ್ ತತ್ತ್ವe್ಞÁನಿ ಮೈಲೇಟಸಿನ ತೇಲ್ಸ್ (ಕ್ರಿ.ಪೂ.624-546) ಭೂಮಿಯನ್ನು ಉಬ್ಬು ತಗ್ಗುಗಳಿಂದ ಕೂಡಿರುವ ಅತಿ ವಿಸ್ತಾರ ಫಲಕವಾಗಿ ಕಂಡಿದ್ದಾನೆ. ಇದು ನಕ್ಷತ್ರಖಚಿತ ಗೋಳಾರ್ಧದಿಂದ ಆವೃತವಾಗಿ ಈ ಒಟ್ಟುರಚನೆ ಅಸೀಮ ಜಲಸಾಗರದಲ್ಲಿ ತೇಲುತ್ತಿದೆ.

	ತೇಲ್ಸನ ಶಿಷ್ಯ ಅನಾಕ್ಸಿಮ್ಯಾಂಡರನ (ಕ್ರಿ.ಪೂ.ಸು.610-546) ಪ್ರಕಾರ ಭೂಮಿಯನ್ನು ಸುತ್ತುವರಿದಿರುವ ಆಕಾಶ ಕಣ್ಣಿಗೆ ಕಾಣುವ ಗೋಳಾರ್ಧ ಮಾತ್ರವೇ ಅಲ್ಲ; ಕಾಣದ ಅರ್ಧವೂ ಸೇರಿ ಪೂರ್ಣಗೋಳ. ಇದು ಧ್ರುವನಕ್ಷತ್ರದ ಸುತ್ತ ಆವರ್ತಿಸುತ್ತಿದೆ. ನೆಲದ ಮೇಲೆ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಪಯಣಿಸಿದಂತೆ ನಕ್ಷತ್ರಚಿತ್ರಗಳ ನೆಲೆಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಈತ ಗಮನಿಸಿದ್ದ. ಉದಾಹರಣೆಗೆ ಉತ್ತರಾಭಿಮುಖವಾಗಿ ಸಾಗಿದಂತೆ ಧ್ರುವನಕ್ಷತ್ರ ವೀಕ್ಷಕನ ಖಮಧ್ಯದ ಸನಿಹಕ್ಕೆ ಸರಿಯುತ್ತದೆ. ಭೂಮಿ ದಕ್ಷಿಣದಿಂದ ಉತ್ತರಕ್ಕೆ ವಕ್ರವಾಗಿರುವುದರಿಂದ ಹೀಗಾಗುತ್ತದೆಂದು ಈತ ವಿವರಿಸಿದ. ಪಶ್ಚಿಮದಿಂದ ಪೂರ್ವಕ್ಕೂ ಅದು ವಕ್ರವಾಗಿರಬಹುದೆಂಬ ಭಾವನೆ ಈತನಿಗೆ ಸುಳಿದಂತಿಲ್ಲ. ಏಕೆಂದರೆ ಈತನ ಭೂಮಿ ಬಲುದೊಡ್ಡ ಉರುಳೆ !

	ಭೂಮಿಯ ಆಕಾರ ಉರುಳೆಯಿಂದ (ಸಿಲಿಂಡರ್) ಗೋಳಕ್ಕೆ (ಸ್ಫಿಯರ್) ಬಡ್ತಿಪಡೆಯಲು ಕ್ರಿ.ಪೂ.ಸು.582-ಸು.497 ಅವಧಿಯಲ್ಲಿ ಬಾಳಿದ ಗ್ರೀಕ್ ತತ್ತ್ವe್ಞÁನಿ ಪೈತಾಗೊರಸ್ ರಂಗಪ್ರವೇಶಿಸುವ ತನಕವೂ ಕಾಯಬೇಕಾಯಿತು. ಇವನು ತೇಲ್ಸ್ ಮತ್ತು ಅನಾಕ್ಸಿಮ್ಯಾಂಡರ್ ಇಬ್ಬರ ಜೊತೆಯೂ ಅಧ್ಯಯನ ಗೈದು ಅವರಿಂದ ಸ್ಫೂರ್ತಿ ಪಡೆದಿರಬಹುದು. ರೂಢಿಯ ಮಾತಿನಲ್ಲಿ ಸಾಯಂಕಾಲದ ತಾರೆ (ಈವ್ನಿಂಗ್ ಸ್ಟಾರ್) ಮತ್ತು ಮುಂಜಾನೆಯ ತಾರೆ (ಮಾರ್ನಿಂಗ್ ಸ್ಟಾರ್) ಎಂಬವು ಬೇರೆ ಬೇರೆ ಕಾಯಗಳಲ್ಲ, ಒಂದೇಕಾಯದ (ಇಂದು ತಿಳಿದಿದೆ_ಶುಕ್ರಗ್ರಹದ) ಪುನರವತಾರಗಳು ಎಂಬುದಾಗಿ ಈತ ವಿವರಿಸಿ ಭೂಮಿಯ ಆಕಾರ ಗೋಳವಾಗಿರುವುದೇ ಇದರ ಕಾರಣ ಎಂದು ವಿವರಿಸಿದ. ಹೀಗೆ ಭೂಮಿಯ ಗೋಳಾಕಾರತ್ವವನ್ನು ಮೊದಲು ಪ್ರತಿಪಾದಿಸಿದವ ಪೈತಾಗೊರಸ್. ಆದರೂ ಇದಕ್ಕೆ ಪ್ರಾಯೋಗಿಕ ಸಮರ್ಥನೆ ಕೊಡುವಲ್ಲಿ ಆತ ವಿಫಲನಾಗಿದ್ದ.

	ಮೊತ್ತಮೊದಲ ಪ್ರಾಯೋಗಿಕ ಸಮರ್ಥನೆ ನೀಡಿದವ ಪ್ರಯೋಗ ಪರಿಣತಮತಿ ಆರ್ಕಿಮಿಡೀಸನ (ಕ್ರಿ.ಪೂ.ಸು.287-ಸು.212) ಮಿತ್ರ ಎರಟೋಸ್ಥನೀಸ್ (ಕ್ರಿ.ಪೂ.ಸು.276-ಸು.196) ಈತ ಪ್ರಾಯೋಗಿಕ ಖಗೋಳವಿe್ಞÁನಿ. ಗಣಿತ ಪಾರಂಗತ, ಕಾರ್ಯಕ್ಷೇತ್ರ ಅಲೆಗ್ಸಾಂಡ್ರಿಯಾ. ಇಲ್ಲಿಂದ ಸುಮಾರು 800 ಕಿಮೀ ಸಾಧಾರಣ ನೇರ ದಕ್ಷಿಣಕ್ಕೆ ಇರುವ ನಗರ ಸೀಯೇನ್ (ಆಧುನಿಕ ಅಸ್ವಾನ್). ಇವೆರಡು ನಗರಗಳಿಗೆ ಸಂಬಂಧಿಸಿದಂತೆ ಒಂದು ವಿಶೇಷ ವಿದ್ಯಮಾನ ಇವನ ಗಮನಕ್ಕೆ ಬಂದಿತು. ಸೀಯೇನಿನಲ್ಲಿ ನೆಲಕ್ಕೆ ಲಂಬವಾಗಿ ನೆಟ್ಟ ಸರಳಿಗೆ ಕರ್ಕ ಸಂಕ್ರಾಂತಿಯ (ಜೂನ್.22) ಮಧ್ಯಾಹ್ನ ನೆರಳೇ ಇಲ್ಲವಾದರೆ ಅಲೆಗ್ಸಾಂಡ್ರಿಯಾದಲ್ಲಿಯ ಸದೃಶ ಸರಳಿಗೆ ನೆರಳಿತ್ತು. ಸೂರ್ಯ ಆ ಗಳಿಗೆ ಸೀಯೇನಿನ ಖಮಧ್ಯದಲ್ಲಿದ್ದರೆ ಮತ್ತು ಅಲೆಗ್ಸಾಂಡ್ರಿಯಾದ ಖಮಧ್ಯದಲ್ಲಿಲ್ಲದಿದ್ದರೆ ಮಾತ್ರ ಇದು ಸಾಧ್ಯ. ಸೂರ್ಯನಿಂದ ಬರುವ ಕಿರಣಗಳೆಲ್ಲವೂ ಸಮಾಂತರವೆಂದು ತಿಳಿದಿತ್ತು. ಅಂದ ಮೇಲೆ ಭೂಮಿ ಮಟ್ಟಸ ಅಥವಾ ಚಪ್ಪಟೆ ಆಗಿರುವುದಾದ ಪಕ್ಷ ನೆಲಕ್ಕೆ ಲಂಬವಾಗಿ ಬೇರೆ ಬೇರೆ ಎಡೆಗಳಲ್ಲಿ ನೆಟ್ಟ ಸಮಉದ್ದದ ಸರಳುಗಳು ನಿರ್ದಿಷ್ಟ ಕ್ಷಣದಲ್ಲಿ ಸಮ ಉದ್ದದ ನೆರಳುಗಳನ್ನೇ ಕೆಡೆಯಬೇಕೆಂಬುದು ಸ್ಪಷ್ಟ. ವಾಸ್ತವ ಪರಿಸ್ಥಿತಿ ತದ್ವಿರುದ್ಧ! ಸೀಯೇನಿನಲ್ಲಿ ನೆರಳಿಲ್ಲ, ಅಲೆಗ್ಸಾಂಡ್ರಿಯಾದಲ್ಲಿ ನೆರಳುಂಟು. ಭೂಮಿಯ ವಕ್ರತೆಯೇ ಇದರ ಕಾರಣವೆಂದು ಎರಟೋಸ್ಥನೀಸ್ ತರ್ಕಿಸಿದ. ಅವನೆಸಗಿದ ಪ್ರಯೋಗ ಅತಿ ಸರಳ. ಕರ್ಕ ಸಂಕ್ರಾಂತಿಯ ಮಧ್ಯಾಹ್ನ ಅಲೆಗ್ಸಾಂಡ್ರಿಯಾದಲ್ಲಿ ಸೂರ್ಯನ ಖಮಧ್ಯದೂರ ಅಳೆದ. ಅದು 7( ಸೀಯೇನ್-ಅಲೆಗ್ಸಾಂಡ್ರಿಯಾ ಅಂತರ ತಿಳಿದಿದ್ದುದರಿಂದ ಭೂಮಿಯನ್ನು ಗೋಳವೆಂದು ಪರಿಭಾವಿಸಿ ಈ ಗೋಳದ ಪರಿಧಿ ಗಣಿಸಿದ. ಅವನಿಗೆ ದೊರೆತ ಬೆಲೆ ಸುಮಾರು 41,140 ಕಿಮೀ. ಇಂದಿನ ಖಚಿತ ಬೆಲೆಗೆ (ಸುಮಾರು 40,000 ಕಿಮೀ) ಇದು ಸನ್ನಿಹಿತವಾಗಿದೆ ಎಂಬುದು ಗಮನಾರ್ಹ. ಈ ಪ್ರಯೋಗ ಯಶಸ್ವಿ ಆಗಬೇಕಾದರೆ ಎರಡೂ ಸ್ಥಳಗಳು ಒಂದೇ ಯಾವ್ಯೋತ್ತರದ (ಮೆರಿಡಿಯನ್) ಮೇಲಿರಬೇಕು. ಸೀಯೇನ್ ಮತ್ತು ಅಲೆಗ್ಸಾಂಡ್ರಿಯಾ ಹೀಗಿರುವುದೊಂದು ಯೋಗಾಯೋಗ.

	ಎರಟೊಸ್ಥನೀಸನ ಸರಳಪ್ರಯೋಗ (ಸರಳು ಪ್ರಯೋಗ ಕೂಡ) ಅನಾವರಣಗೊಳಿಸಿದ ಜಟಿಲ ದೃಶ್ಯ ಅಂದಿನವರ ಸಾಮಾನ್ಯ ಪ್ರಜ್ಞೆಗೆ (= ಪೂರ್ವಾಗ್ರಹಗಳ ಸಮುಚ್ಚಯ ?) ಸವಾಲಾಗಿತ್ತು. ಅವರ e್ಞÁತ ಜಗತ್ತಿನ ಗಾತ್ರದೊಂದಿಗೆ ಹೋಲಿಸಿದಾಗ ಭೂಮಿ ಒಂದು ಮಹಾದೈತ್ಯಕಾಯವಾಗಿ ಎದುರುನಿಂತಿತ್ತು. ವಿದ್ವಜ್ಜನ ಈತನ ಪ್ರಯೋಗದಲ್ಲೇ ಏನೋ ದೋಷ ನುಸುಳಿದೆ ಎಂದು ತೀರ್ಮಾನಿಸಿ ಈ "ಪ್ರೌಢ" ಬೆಲೆಯನ್ನು ತಿರಸ್ಕರಿಸಿದರು. ನಿಜ, ಸಾಗರದೊಳಗೆ ತಿಮಿಂಗಿಲ ಕ್ರಿಮಿ ಆಗಿರುವುದಕ್ಕಿಂತ ಕೂಪದೊಳಗೆ ಮಂಡೂಕ ಮಹಾರಾಜನಾಗಿರುವುದೇ ಲೇಸು !

	ವಿದ್ವನ್ಮಣಿಗಳ ಅಸಾಮಾನ್ಯ ಪ್ರಜ್ಞೆಗೆ ( = ಆತ್ಮ ಪ್ರತಿಷ್ಠೆ ?) ಪಥ್ಯವಾಗುವ ಬೆಲೆ ನೀಡಿದವ ಗ್ರೀಕ್ ತತ್ತ್ವe್ಞÁನಿ ಪಾಸಿಡೋನೀಯಸ್ (ಕ್ರಿ.ಪೂ.ಸು.135-ಸು.50). ಇವನು ಎರಟೋಸ್ಥನೀಸನ ಪ್ರಯೋಗವನ್ನು ಪುನರಾವರ್ತಿಸಿದ. ಆದರೆ ಸೂರ್ಯನ ಬದಲು ಅಗಸ್ತ್ಯ ನಕ್ಷತ್ರ (ಕೆನೊಪಸ್) ಇವನ ಲಕ್ಷ್ಯ. ಸಮೀಪದ ಸೂರ್ಯನಿಗಿಂತ ಸುದೂರದ ನಕ್ಷತ್ರದ ಆಯ್ಕೆ ತಾತ್ತ್ವಿಕವಾಗಿ ಒಂದು ಸುಧಾರಣೆ ನಿಜ. ಆದರೆ ಗಣನೆಯಲ್ಲಿ ತಪ್ಪು ಹಣಿಕಿತ್ತು. ಹೀಗಾಗಿ ಭೂಪರಿಧಿಗೆ ದೊರೆತ ಬೆಲೆ ಕೇವಲ 28,800 ಕಿಮೀ. ಪುಟ್ಟನೆಲ, ಗಟ್ಟಿಕುಳ-ಇದು ಮಾನವನಿಗೆ ಸಮಾಧಾನ ತಂದ ಕಲ್ಪನೆ.

	ಮುಂದಿನ ಹಲವು ಶತಮಾನ ಪರ್ಯಂತ ಈ ತಪ್ಪು ಬೆಲೆ ವೈe್ಞÁನಿಕ ಚಿಂತನೆಯನ್ನು ಪ್ರಭಾವಿಸಿತು. ಉದಾಹರಣೆಗೆ ಕ್ರಿಸ್ಟೋಫರ್ ಕೊಲಂಬಸ್ (ಕ್ರಿ.ಶ. 1451-1506) ಕೈಗೊಂಡ ಮಹಾ ಸಾಗರೋತ್ತರಣ. ಸ್ಪೇನಿನಿಂದ ಹೊರಟು ಕಡಲಿನಲ್ಲಿ ತೇಲಿ ಏಶ್ಯಖಂಡ ತಲುಪುವುದು ಹೇಗೆ? ಪೂರ್ವಾಭಿಮುಖವಾಗಿ ಹೋಗುವುದಾದರೆ ಆಫ್ರಿಕಾಖಂಡ ಬಳಸಿ ಸಾಗಬೇಕು. ಹೀಗಲ್ಲದೇ ಪಶ್ಚಿಮಾಭಿಮುಖವಾಗಿ ಯಾನಿಸಿದುದಾದರೆ, ಭೂಮಿ ಹೇಗೂ ಗೋಳವಾಗಿರುವುದರಿಂದ, ಕೇವಲ ಕೆಲವೇ ಸಾವಿರ ಕಿಲೋಮೀಟರ್ ಗಮಿಸುವಾಗ ಏಶ್ಯ ಖಂಡದ ಪೂರ್ವ ಕರಾವಳಿ ತಲಪಬಹುದೆಂಬುದು ಅವನ ಎಣಿಕೆ. ಕೊಲಂಬಸ್ ಏನಾದರೂ ಭೂಪರಿಧಿಗೆ ಪಾಸಿಡೊನೀಯಸನ ಕಿರಿಯ (ಮತ್ತು ತಪ್ಪು) ಬೆಲೆ ಆಯದೇ ಎರಟೋಸ್ಥನೀಸನ ಹಿರಿಯ (ಮತ್ತು ಒಪ್ಪು) ಬೆಲೆ ಆಯ್ದಿದ್ದರೆ ನಾಗರಿಕತೆಯ ಗಾಲಿ ಎತ್ತ ಹೇಗೆ ಉರುಳಿರುತ್ತಿತ್ತೋ?

	ಮುಂದೆ ಬಂದವ ಫ್ರೆಂಚ್ ಖಗೋಳವಿe್ಞÁನಿ ಜೀನ್ ರೀಶೇ (1630-96). ದೂರದ ಫ್ರೆಂಚ್ ಗಯಾನಕ್ಕೆ (ಅಮೆರಿಕ ಖಂಡ) ಈತ ಅನ್ವೇಷಕನಾಗಿ ಹೋದ. ಅಲ್ಲಿಯ ಕೈಯೀನ್‍ನಗರ ಇವನ ನೆಲೆ. ಇದು ಸಮಭಾಜಕದ (ಇಕ್ವೇಟರ್) ಸನಿಹದಲ್ಲಿದೆ. ಪ್ಯಾರಿಸ್ ಗಡಿಯಾರದ ಕಾಲಕ್ಕೆ ಹೋಲಿಸಿದಾಗ ಕೈಯೀನ್ ಗಡಿಯಾರದ ಕಾಲ ದಿವಸವೊಂದರ 2.5 ಮಿನಿಟುಗಳನ್ನು ಕಳೆದುಕೊಳ್ಳುತ್ತಿದ್ದುದು ಇವನ ಗಮನಕ್ಕೆ ಬಂದಿತು. ಅಂದರೆ ಕೈಯೀನಿನಲ್ಲಿ ಲೋಲಕದ ಅಂದೋಳನ ಗತಿ ಪ್ಯಾರಿಸಿನಲ್ಲಿಯದಕ್ಕಿಂತ ನಿಧಾನವೆಂದಾಯಿತು.

	ಈ ವಿಪರ್ಯಾಸಕ್ಕೆ ಸಮರ್ಪಕ ವ್ಯಾಖ್ಯಾನವಿತ್ತವ ಇಂಗ್ಲೆಂಡಿನ ಐಸಾಕ್ ನ್ಯೂಟನ್ (1642-1727). ಲೋಲಕದ ಆಂದೋಳನಗತಿ ಭೂಗುರುತ್ವಕ್ಕೆ ಪ್ರತಿಲೋಮ ವರ್ಗಮೂಲಾನುಪಾತದಲ್ಲಿದೆ (ಣ= ಇಲ್ಲಿ ಣ = ಕಾಲ, ಟ =ಲೋಲಕದ ಉದ್ದ, g = ಭೂಗುರುತ್ವ). ಹೀಗಾಗಿ ಆ ಎರಡು ಸ್ಥಳಗಳ ಪೈಕಿ ಕೈಯೀನಿನಲ್ಲಿಯ ಭೂಗುರುತ್ವ ಪ್ಯಾರಿಸಿನಲ್ಲಿಯದಕ್ಕಿಂತ ಅಧಿಕ, ಎಂದೇ ಕೈಯೀನ್ ಕಾಲ ಪ್ಯಾರಿಸ್ ಕಾಲಕ್ಕಿಂತ ನಿಧಾನ ಎಂದು ಆತ ತರ್ಕಿಸಿದ. ರಾಶಿಯೂ (ಮಾಸ್) ಗುರುತ್ವವೂ (ಗ್ರ್ಯಾವಿಟಿ) ಅನುಲೋಮ ಸಂಬಂಧಿಗಳಾಗಿರುವುದರಿಂದ (g = ಉಒ/ಡಿ2. ಇಲ್ಲಿ g = ಗುರುತ್ವ, ಉ = ವಿಶ್ವ ಗುರುತ್ವಾಕರ್ಷಣ ನಿಯತಾಂಕ, ಒ = ಭೂರಾಶಿ, ಡಿ = ಭೂತ್ರಿಜ್ಯ) ಕೈಯೀನ್ ಪ್ರದೇಶದಲ್ಲಿ ಜಾಸ್ತಿ ಭೂರಾಶಿ ಮತ್ತು ಪ್ಯಾರಿಸ್ ಪ್ರದೇಶದಲ್ಲಿ ಕಡಿಮೆ ಭೂರಾಶಿ ಪೇರಿಕೊಂಡಿವೆ ಎಂಬುದು ಅನುಗತವಾಯಿತು. ಅಂದರೆ ಕೈಯೀನ್ ಪ್ರದೇಶದಲ್ಲಿಯ ಭೂತ್ರಿಜ್ಯ ಪ್ಯಾರಿಸ್ ಪ್ರದೇಶದಲ್ಲಿಯದಕ್ಕಿಂತ ಜಾಸ್ತಿ ಎಂದಾಯಿತು. ಈಗ, ಕೈಯೀನ್ ಸಮಭಾಜಕ ವಲಯದಲ್ಲಿಯೂ ಪ್ಯಾರಿಸ್ ಉತ್ತರ ಅಕ್ಷಾಂಶ ವಲಯದಲ್ಲಿಯೂ ಇವೆ ಎಂಬುದನ್ನು ಪರಿಗಣಿಸಿದರೆ ಭೂಮಿ ಪರಿಪೂರ್ಣಗೋಳವಾಗಿಲ್ಲ. ಸಮಭಾಜಕ ವಲಯದಲ್ಲಿ ಜಾಸ್ತಿ ಉಬ್ಬಿಕೊಂಡಿದ್ದು ಧ್ರುವವಲಯಗಳಿಗೆ ಹೋದಂತೆ ಚಪ್ಪಟೆ ಆಗುವುದೆಂದು ತರ್ಕಿಸುವುದು ಸುಲಭ. ಭೂಮಿಯ ಆವರ್ತನ ಚಲನೆಯ ಪರಿಣಾಮವಾಗಿ ಆವರ್ತನಾಕ್ಷದ ಕೊನತಗಾಳಾದ ಧ್ರುವ ಪ್ರದೇಶಗಳಲ್ಲಿ ಅದು ಚಪ್ಪಟೆ ಆಗಿದ್ದು ಸಮಭಾಜಕ ಪ್ರದೇಶದಲ್ಲಿ ಉಬ್ಬಿಕೊಂಡಿರುವುದು ನಿರೀಕ್ಷಿತವೇ. ಇಂಥ ಆಕಾರಕ್ಕೆ ಗಣಿತಪರಿಭಾಷೆಯಲ್ಲಿ ಹ್ರಸ್ವಾಕ್ಷ ದೀರ್ಘವೃತ್ತಕಲ್ಪವೆಂದು (ಆಬ್ಲೇಟ್ ಸ್ಫೆರಾಯ್ಡ್) ಹೆಸರು.

	ಆಕಾಶಯುಗ ಆರಂಭವಾದ (1957) ಬಳಿಕ ಭೂವಲಯದ ಆಕಾರ ವಿಶೇಷ ಸೂಕ್ಷ್ಮ ತಪಾಸಣೆಗೆ ಒಳಗಾಯಿತು. ಭೂಮಿಯಿಂದ ವಿವಿಧ ಔನ್ನತ್ಯಗಳಲ್ಲಿ ಮತ್ತು ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸಲು ನಿಯೋಜಿಸಿದ ಉಪಗ್ರಹಗಳು ಭೂಗುರುತ್ವವಿತರಣೆಯ ಸೂಕ್ಷ್ಮ ಮತ್ತು ವ್ಯಾಪಕ ಚಿತ್ರ ಒದಗಿಸಿವೆ. ಇದನ್ನು ಆಧರಿಸಿ ಭೂಮಿಯ ಖಚಿತ ಆಕಾರವನ್ನು ನಿರ್ಧರಿಸಲಾಗಿದೆ. ಇದರ ಪ್ರಕಾರ ಭೂಮಿಗೆ ಪರಿಪೂರ್ಣ ಹ್ರಸ್ವಾಕ್ಷ ದೀರ್ಘವೃತ್ತಕಲ್ಪಾಕಾರ ಕೂಡ ಇಲ್ಲ. ತುಸುವೇ ಎಡ್ಡ ತಿಡ್ಡ ಉಬ್ಬಿಕೊಂಡು ಮರಸೇಬಿನ (ಪೇರ್ ಹಣ್ಣು) ಆಕಾರ ಪಡೆದಿದೆ. ಸಮಭಾಜಕೀಯ ತ್ರಿಜ್ಯದ ಉದ್ದ 6378 ಕಿಮೀ. ಧ್ರುವೀಯ ತ್ರಿಜ್ಯದ ಉದ್ದ 6359 ಕಿಮೀ. ಸಮಭಾಜಕದ ಉದ್ದ 40,077 ಕಿಮೀ, ರೇಖಾಂಶ ವೃತ್ತದ ಉದ್ದ 40,009 ಕಿಮೀ.
6. ಸಾಗರ: ನಮ್ಮ ಗ್ರಹದ ನಿಜವಾದ ಹೆಸರು ಸಾಗರ ಎಂದಾಗಬೇಕು. ಭೂಮಿ ಎಂದಲ್ಲ. ಏಕೆಂದರೆ ಇದು ಶೇಕಡಾ 70 ಭಾಗವೂ ನೀರಿನಿಂದ ಆವೃತವಾಗಿದೆ. ಇಷ್ಟೇ ಅಲ್ಲ. ಈ ಗ್ರಹದ ಘನ ಮೇಲ್ಮೈಯ ಶೇಕಡಾ 60 ಭಾಗವನ್ನು ಆವರಿಸಿರುವ ತೆಳು ತೊಗಟೆ ಸಾಗರ ಮಧ್ಯದ ಒಂದು ವಿಶಿಷ್ಟ ಭೂವೈe್ಞÁನಿಕ ಗಿರಣೆಯ ಉತ್ಪನ್ನ.

	ನೀರು ಮತ್ತು ಗಾಳಿ ಶಿಲಾಗೋಳದ ಜೊತೆ ಅಂತರಕ್ರಿಯೆ ಎಸಗಿ ಜೀವಿಗಳ ಉಳಿವಿಗೆ ಅವಶ್ಯವಾಗುವ ರಾಸಾಯನಿಕ ನೆಲೆಯನ್ನು ಒದಗಿಸುತ್ತವೆ. ವಾಸ್ತವವಾಗಿ ಸಾಗರ ಮತ್ತು ವಾಯುಮಂಡಲ ಏಕ ವ್ಯವಸ್ಥೆಯೊಂದರ ದ್ವಿಘಟಕಗಳು. ಈ ವ್ಯವಸ್ಥೆ ಸಮಾಕಲಿತ ರಾಸಾಯನಿಕ ಸ್ಥಾವರದಂತೆ (ಇಂಟೆಗ್ರೇಟೆಡ್ ಕೆಮಿಕಲ್ ಪ್ಲಾಂಟ್) ವರ್ತಿಸುತ್ತದೆ.

	ಸಾಗರದ ರಸಾಯನ ವೃತ್ತಾಂತದಲ್ಲಿಯ ಬದಲಾವಣೆಗಳು ಭೂಮಿಯ ಗತಪರಿಸರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಬಲ್ಲವು. ಉದಾಹರಣೆಗೆ ವಾಯುಮಂಡಲದ ಪ್ರಮುಖ ಘಟಕವಾದ ಕಾರ್ಬನ್ ಡೈ ಆಕ್ಸೈಡ್ ವಾಯುಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಜೀವಿಯ ಉಳಿವು ಅಳಿವು ಇದರ ಮೊತ್ತವನ್ನು ಅವಲಂಬಿಸಿ ಉಂಟು. ಏಕೆಂದರೆ ಸೂರ್ಯನಿಂದ ಭೂಮಿಗೆ ಪಾತವಾಗುವ ಆತಪನ (ಇನ್ಸೊಲೇಶನ್) ಭೂಮಿಯಿಂದ ಅತಿರಕ್ತ ವಿಕಿರಣ ವಲಯದಲ್ಲಿ ಪ್ರತಿಫಲಿಸಲ್ಪಟ್ಟು ಆಕಾಶಕ್ಕೆ ಪ್ರವಹಿಸುತ್ತದೆ. ಆದರೆ ವಾಯುಮಂಡಲದ ಕಾರ್ಬನ್ ಡೈ ಆಕ್ಸೈಡ್ ಭೂಮಿಯ ಸುತ್ತ ತೊಡಿಸಿರುವ ಕವಚದಂತೆ ವರ್ತಿಸಿ ಈ ವಿಕಿರಣಪ್ರವಾಹವನ್ನು ಹೀರಿಕೊಂಡು ಹೊರಹರಿಯದಂತೆ ತಡೆ ಹಿಡಿಯುತ್ತವೆ. ಇದರಿಂದ ವಾಯುಮಂಡಲದ ಉಷ್ಣತೆ ಏರುತ್ತದೆ. ಮಾನವ ತನ್ನ ಚಟುವಟಿಕೆಗಳಿಂದ ವಾಯುಮಂಡಲಕ್ಕೆ ಸಾಕಷ್ಟು ಕಾರ್ಬನ್ ಡೈಆಕ್ಸೈಡನ್ನು ಊಡುತ್ತಲೇ ಬಂದಿದ್ದಾನೆ ನಿಜ. ಆದರೆ ಈ ದಿಶೆಯಲ್ಲಿ ಸ್ವತಂತ್ರವಾಗಿ ಸಾಗರದ ಪಾತ್ರ ಇನ್ನೂ ಅಧಿಕ ಮಟ್ಟದಲ್ಲಿದೆ ಎಂಬುದು ಈಚಿನ ಅಧ್ಯಯನಗಳಿಂದ ತಿಳಿದು ಬಂದಿದೆ. ಗತಯುಗಗಳಲ್ಲಿ ಅಂದರೆ ನಾಗರಿಕತೆ ವಿಶೇಷವಾಗಿ ವಿಕಸಿಸಿರದ ಪ್ರಾಚೀನಕಾಲಗಳಲ್ಲಿ ಸಾಗರಜನಿತ ಕಾರ್ಬನ್ ಡೈ ಆಕ್ಸೈಡಿನ ಮೊತ್ತ ವಾಯುಮಂಡಲದಲ್ಲಿ ಅಧಿಕವಾದುದೇ ಆಗ ಸಂಭವಿಸಿದ ಹಿಮಪ್ರವಾಹಗಳಿಗೆ (ಗ್ಲೇಸಿಯೇಶನ್) ಕಾರಣವೆಂದು ವಿe್ಞÁನಿಗಳು ತರ್ಕಿಸಿದ್ದಾರೆ.

	ಸದ್ಯದಲ್ಲಿ ಸಾಗರಜಲದಲ್ಲಿ ವಿಲೀನವಾಗಿರುವ ಕಾರ್ಬನ್‍ಡೈಆಕ್ಸೈಡಿನ ಮೊತ್ತ ವಾಯುಮಂಡಲದಲ್ಲಿರುವ ಅದರ ಮೊತ್ತದ 60 ಪಾಲು ಇದೆ. ಕೆಲವೊಂದು ಸಾಗರ ಜೀವಿಗಳ ಉಣಿಸಿದ ಉಗ್ರಾಣ ಈ ವಿಲೀನಿತ ಅನಿಲ. ಅವು ನಿಶ್ವಸಿಸುವ ಅನಿಲವೇ ನೆಲಪ್ರಾಣಿಗಳ ಉಸಿರಾದ ಆಕ್ಸಿಜನ್. ಹೀಗೆ ನೆಲ-ಜಲ ಎಂಬ ಬೇಧವಿಲ್ಲದೆ ಜೀವಿಗಳ ನಿಯಂತ್ರಣದಲ್ಲಿ ಸಾಗರ ನಿರ್ವಹಿಸುವ ಪಾತ್ರ ಅತಿ ಮುಖ್ಯವಾದದ್ದು. ಈ ಸಮತೋಲವನ್ನು ಅದು ಹೇಗೆ ಸಾಧಿಸುತ್ತದೆ ಎಂದು ತಿಳಿಯಬೇಕಾದರೆ ಸಾಗರವನ್ನು ದ್ವಿಜಲಾಶಯವಿರುವ ಒಂದು ಬೃಹತ್ ಜಲವಾಸ (ಅಕ್ವೇರಿಯಮ್) ಎಂದು ಪರಿಗಣಿಸುವುದು ಅಗತ್ಯ.

	ಈ ಎರಡು ಜಲಾಶಯಗಳ ಪೈಕಿ ಮೇಲಿನದು ನೆಲ ಮತ್ತು ವಾಯುವಿನೊಡನೆ ಅಂತರಕ್ರಿಯೆಗೆ ಒಳಗಾಗುತ್ತದೆ. ಅಂದರೆ ಸೌರವಿಕಿರಣದ ದೆಸೆಯಿಂದ ನೀರು ಕಾದು ಆವಿಯಾಗಿ ಮೇಲೇರಿ ಮೋಡವಾಗಿದೂರ ಸಂಚರಿಸಿ ಎಲ್ಲೋ ಮಳೆಯಾಗಿ ಸುರಿದು ಆ ನೀರು ನೆಲದ ಲವಣಾಂಶ ಮುಂತಾದವನ್ನು ತೊಳೆದುಕೊಂಡು ಬಂದು ಸಾಗರಕ್ಕೆ ಸುರಿಯುತ್ತದೆ. ಇತ್ತ ಅದೇ ವಿಕಿರಣದ ಇರವಿನಲ್ಲಿ ಫೈಟೊಪ್ಲ್ಯಾಂಕ್ಟನ್ನುಗಳೆಂಬ ಅತಿ ಸೂಕ್ಷ್ಮಕಡಲ ಸಸ್ಯಗಳು ಜಲವಿಲೀನಿತ ಕಾರ್ಬನ್ ಡೈಆಕ್ಸೈಡನ್ನು ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯ ಮೂಲಕ ತಮ್ಮ ಆಹಾರವಾಗಿ ಮಾರ್ಪಡಿಸಿಕೊಂಡು ಮುಕ್ತ ಆಕ್ಸಿಜನ್ನನ್ನು ವಾಯುಮಂಡಲಕ್ಕೆ ಬಿಟ್ಟುಕೊಡುತ್ತವೆ.

	ಕಡಲಿಗೆ ನದಿಗಳ ಮೂಲಕ ಹರಿದು ಬಂದ ಪದಾರ್ಥಗಳು, ಸಮುದ್ರಾಂತರ್ಗತ ಜ್ವಾಲಾಮುಖಿಗಳು ಕಾರುವ ಭಸ್ಮಗಳು, ಜೀವ್ಯವಶೇಷಗಳು ಮುಂತಾದವು ಮೇಲಿನ ಜಲಾಶಯದಿಂದ ಕೆಳಗಿನ ಜಲಾಶಯಕ್ಕೆ ಕ್ರಮೇಣ ಕಂತಿ ಅಲ್ಲಿಯ ಏಕಾಣುಜೀವಿಗಳಿಗೆ ಉಣಿಸಾಗಬಹುದು. ಅಲ್ಲಿ ಪದರ ಪದರ ಮಡ್ಡಿಯಾಗಿ ಶೇಖರವಾಗಬಹುದು. ಭಾರ ಜಾಸ್ತಿ ಆದಾಗ ತೊಗಟೆಯನ್ನು ಭೇದಿಸಿ ಕವಚದತ್ತ ಕೂಡ ಒಸರಬಹುದು.

	ಕೆಳ ಮತ್ತು ಮೇಲಿನ ಜಲಾಶಯಗಳನ್ನು ಪ್ರತ್ಯೇಕಿಸುವುದು ಅವುಗಳ ನಡುವಿನ ಉಷ್ಣತಾಂತರ ಹಾಗೂ ಸಾಂದ್ರತಾಂತರ. ಮೇಲಿನದರ ಉಷ್ಣತೆ ಜಾಸ್ತಿ, ಸಾಂದ್ರತೆ ಕಡಿಮೆ; ಕೆಳಗಿನದರ ಉಷ್ಣತೆ ಕಡಿಮೆ, ಸಾಂದ್ರತೆ ಜಾಸ್ತಿ, ಸಾಗರವೇನಾದರೂ ನಿಂತನೀರಿನ ಮಡುವಾಗಿದ್ದರೆ ಈ ಮೇಲಿನದೊಂದು ಸ್ಥಗಿತ ಪರಿಸ್ಥಿತಿ ಆಗಿರುತ್ತಿತ್ತು. ಏಕೆಂದರೆ ತಣ್ಣನೆಯ ಹಾಗೂ ಅಧಿಕ ಸಾಂದ್ರತೆಯ ನೀರು ಮೇಲಕ್ಕೆ ಏರುವ ಸಂಭಾವ್ಯತೆಯೇ ಇಲ್ಲ. ಆದರೆ ಸಾಗರಾಂತರ್ಗತ ಜ್ವಾಲಾಮುಖಿಗಳ ಕಾರ್ಯ, ತೊಗಟೆ ಫಲಕಗಳ ನಿರಂತರ ಚಲನೆ, ಭೂಮ್ಯಾ ವರ್ತನೆ, ಸಾಗರದ ಮೇಲೆ ಸೂರ್ಯ ಚಂದ್ರರ ಗುರುತ್ವಾಕರ್ಷಣೆ ಮುಂತಾದವು ಕಡಲನ್ನು ನಿಂತ ನೀರಿನ ಮಡುವಾಗಿ ಹಳಸಲು ಬಿಡದೆ ಅದನ್ನು ಸತತಮಂಥನ ಸ್ಥಿತಿಯಲ್ಲಿಡುವ ಬಾಹ್ಯ ಬಲಗಳಾಗಿ ವರ್ತಿಸುತ್ತವೆ. ಹೀಗಾಗಿ ಸಾಗರದ ರಸಾಯನ ವೃತ್ತಾಂತ ನಿರಂತರ ಕ್ಷೋಭೆಯಲ್ಲಿರುವುದು.

7 ವಾಯುಮಂಡಲ : ಭೂಮಿಯ ಉಷ್ಣ ಎಂಜಿನ್ನಿನ ಕಾರ್ಯನಿರ್ವಾಹಕ ತರಲವೇ (ವರ್ಕಿಂಗ್ ಫ್ಲೂಯ್ಡ್) ವಾಯುಮಂಡಲ. ಇದರ ತೀವ್ರ ಗತಿಶೀಲತೆ ಭೂಮಿಗೆ ಪಾತವಾಗುವ ಸೌರವಿಕಿರಣದ ವಿತರಣೆಗೆ ಕಾರಣವಾಗಿದೆ. 

	ಸೂರ್ಯನಿಂದ ಬರುವ ಆತಪನದ ಅಧಿಕಭಾಗವನ್ನು ವಾಯುಮಂಡಲ ಉಷ್ಣವಾಗಿ ಪರಿವರ್ತಿಸಿ ಮತ್ತೆ ಆಕಾಶಕ್ಕೆ ಮರುವಿಕಿರಣಗೊಳಿಸುತ್ತದೆಂದು ಹೇಳಿದ್ದು ಸರಿಯಷ್ಟೆ. ಮಾರುತಗಳು ಈ ಶಕ್ತಿಯನ್ನು ಪುನರ್ವಿತರಿಸುತ್ತವೆ. ಆ ವೇಳೆ ಸಾಕಷ್ಟು ಉಷ್ಣ ಸೋರಿಹೋಗುತ್ತದೆ. ಸಾಗರ ಪ್ರವಾಹಗಳು ಈ ರೀತಿಯ ಸೋರಿಕೆಗೆ ಕಾರಣವಾಗುವುದಿಲ್ಲ. ವಾಯುಮಂಡಲ ವ್ಯವಸ್ಥೆಯ ಹ್ರಸ್ವಕಾಲೀನ ಏರಿಳಿತಗಳೂ (ಹವೆ) ಸರಾಸರಿ ಹವೆಯ ದೀರ್ಘಕಾಲೀನ ಏರಿಳಿತಗಳೂ (ವಾಯುಗುಣ) ಭೂಚರಿತ್ರೆಯ ಬಲು ಮುಖ್ಯ ಅಂಶಗಳು.

	ಭೂಮಿಯ ಉಗಮಕ್ಕೆ ಕಾರಣವಾದ ನೀಹಾರಿಕೆಯ ಘಟಕಗಳಿಗೂ ಪ್ರಕೃತ ವಾಯುಮಂಡಲದ ಘಟಕಗಳಿಗೂ ಇರುವ ಸಂಬಂಧ ಎರಡೂ ಅನಿಲಗಳೆಂಬುದರ ಹೊರತು ಬಹುತೇಕ ಶೂನ್ಯ. ವಾಸ್ತವವಾಗಿ ವಾಯುಮಂಡಲದ ಇಂದಿನ ಸಂಯೋಜನೆ ಬಾಷ್ಪಶೀಲ ಧಾತುಗಳಿಗೂ (ವೋಲಟೈಲ್ ಎಲಿಮೆಂಟ್ಸ್) ಸೌರನೀಹಾರಿಕೆಗೂ ನಡುವೆ ಸಂಭವಿಸಿದ ಸಂಕೀರ್ಣ ಹಾಗೂ ಸುದೀರ್ಘ ರಾಸಾಯನಿಕ ಕ್ರಿಯೆಗಳ ಫಲ. ಆರಂಭದಲ್ಲಿ ಈ ಕ್ರಿಯೆಗಳಲ್ಲಿ ಭಾಗವಹಿಸಿದ ಘಟಕಗಳೆಂದರೆ ಭೂಕವಚದಿಂದ ಹೊರಚಿಮ್ಮಿದ ಮಾಗ್ಮ, ತೊಗಟೆಯ ಮೇಲಿನ ಶಿಲೆಗಳು, ಸಾಗರದ ಮೇಲ್ಮೈ, ಜೈವಿಕಗೋಳ ಮತ್ತು ಸೌರ ನೀಹಾರಿಕೆಯ ದೂಳು.

	ನೈಟ್ರೊಜನ್, ಆಕ್ಸಿಜನ್ ಮತ್ತು ಆರ್ಗಾನ್ ಇವು ಶುಷ್ಕ ವಾಯುವಿನ ಪ್ರಧಾನ ಘಟಕಗಳು (ಸ್ಥೂಲವಾಗಿ 79:20:1 ಅನುಪಾತದಲ್ಲಿ). ಇಡೀ ಭೂಮಿಯನ್ನು ಕುರಿತಂತೆ ಈ ಅನುಪಾತ ಸುದೀರ್ಘ ಕಾಲದಲ್ಲಿ ಸ್ಥಿರವಾಗಿಯೇ ಇರುವುದು. ತೇವಾಂಶದ ಮೊತ್ತ ಹೆಚ್ಚು ಕಡಿಮೆ ಆಗುತ್ತಿರುವುದು: ಘನಗಾತ್ರ ರೀತ್ಯಾ ಶೇಕಡಾ 4 ರಿಂದ ಅತ್ಯಲ್ಪ ಪ್ರಮಾಣದವರೆಗೂ. ಹೇಗೂ ವಾಯುಮಂಡಲ ನೀರಿನ ಸಾಧಾರಣ ಸಂಗ್ರಹಾಶಯ ಕೂಡ ಅಲ್ಲ. ಏಕೆಂದರೆ ಸಾಗರದಲ್ಲಿಯ ನೀರಿನ ರಾಶಿ ವಾಯುಮಂಡಲದ ರಾಶಿಯ 300 ಮಡಿಗಿಂತಲೂ ಜಾಸ್ತಿ ಇದೆ. ವಾಯುಮಂಡಲದ ಘಟಕಗಳಾಗಿ ಇತರ ಕೆಲವು ಅನಿಲಗಳೂ ಇವೆ: ಕಾರ್ಬನ್ ಡೈಆಕ್ಸೈಡ್ (ಶುಷ್ಕವಾಯುವಿನಲ್ಲಿ 340: 1,000,000 ಅನುಪಾತದಲ್ಲಿ); ನಿಯಾನ್ (18: 1,000,000); ಮತ್ತು ಹೀಲಿಯಮ್ (5: 1,000,000); ಓಝೋನ್ (2: 1,000,000) ಇತ್ಯಾದಿ.

	ನಿಯಾನ್, ಕ್ರಿಪ್ಟಾನ್, ಕ್ಸೀನಾನ್ ಮುಂತಾದ ಅನಿಲಗಳು ಭೂರಾಸಾಯನಿಕವಾಗಿ ಜಡವಾಗಿರುವುದರಿಂದ ಇವು ಭೂಮಿಯ ಆರಂಭದ ದಿನಗಳ ಶಾಶ್ವತ ದಾಖಲೆಗಳಾಗಿಯೇ ಇಂದಿಗೂ ಉಳಿದಿವೆ. ಓಝೋನಿನ ಬಾಹುಳ್ಯ ವಾಯುಮಂಡಲದಲ್ಲಿ ಔನ್ನತ್ಯದೊಡನೆ ಬದಲಾಗುತ್ತಿದ್ದು 30 ಕಿಮೀ ಎತ್ತರದಲ್ಲಿ ಗರಿಷ್ಠ ಪ್ರಮಾಣದಲ್ಲಿರುವುದು (12: 1,000,000). ಸೂರ್ಯನಿಂದ ಹೊರಟು ಭೂತಳಕ್ಕೆ ಬರುವ ತೀವ್ರ ವಿಕಿರಣದ ಎದುರು ಓಝೋನ್‍ವಲಯ ಕವಚದಂತೆ ವರ್ತಿಸಿ ಅದರ ಹಾನಿ ಜೀವಿಗಳಿಗೆ ತಟ್ಟದಂತೆ ತಡೆಯುತ್ತದೆ.

	ಭೂಮಿಗೆ ಪಾತವಾಗುವ ಎಲ್ಲ ವಿಕಿರಣವೂ ಇಲ್ಲಿ ಹೀರಲ್ಪಡುವುದಿಲ್ಲ. ಇದರ ಸುಮಾರು 30% ಭಾಗವನ್ನು ವಾಯುಮಂಡಲವೂ ಭೂತಳವೂ ಆಕಾಶಕ್ಕೆ ಪ್ರತಿಫಲಿಸುತ್ತವೆ. ಮೋಡಗಳು, ವಾಯುಮಂಡಲದಲ್ಲಿರುವ ದೂಳು, ಅನಿಲಾಣುಗಳು, ಹಿಮರಾಶಿ ಮತ್ತು ಸಸ್ಯರಹಿತ ನೆಲ ಈ ಪ್ರತಿಫಲಕಗಳ ಪೈಕಿ ಮುಖ್ಯವಾದವು. ಅಂದಮೇಲೆ ಜ್ವಾಲಾಮುಖಿಗಳ ಅಥವಾ ಇತರ ಮಾನವಕೃತ ಚಟುವಟಿಕೆಗಳ ಕಾರಣವಾಗಿ ವಾಯುಮಂಡಲಕ್ಕೆ ಅಧಿಕ ಮೊತ್ತದ ದೂಳು ಸೇರಿದುದಾದರೆ ಪ್ರತಿಫಲನಾಂಶ ಜಾಸ್ತಿ ಆಗಿ ಒಟ್ಟಾರೆ ಭೂಮಿಯ ಉಷ್ಣತೆ ಕುಸಿಯುವ ಸಂಭಾವ್ಯತೆ ಇದೆ.

	ಪರಮಾಣು ಇಲ್ಲವೇ ಹೈಡ್ರೊಜನ್ ಬಾಂಬುಗಳ (ನ್ಯೂಕ್ಲಿಯರ್ ಬಾಂಬುಗಳು) ಸ್ಫೋಟನೆಯಿಂದ ವಾಯುಮಂಡಲದಲ್ಲಿ ಈ ತರಹದ ಪರಿವರ್ತನೆಯಾಗಿ ಆ ಕಾಲದಲ್ಲಿ ಅತಿ ಚಳಿಗಾಲ ಬರಬಹುದೆಂದು ಸಕಾರಣವಾಗಿಯೇ ವಾದಿಸುವ ವಿe್ಞÁನಿಗಳಿದ್ದಾರೆ. ನ್ಯೂಕ್ಲಿಯರ್ ವಿಂಟರ್ (ನ್ಯೂಕ್ಲಿಯರ್ ಚಳಿಗಾಲ) ಎಂದು ಅವರಿದನ್ನು ಹೆಸರಿಸಿದ್ದಾರೆ.

8 ಜೀವಿಗೋಳ: 	ನಮ್ಮ ಗ್ರಹದ ವರ್ತಮಾನ ಅಸ್ತಿತ್ವಕ್ಕೆ ಕಾರಣವಾಗಿರುವ ಎಲ್ಲ ಗತ್ಯಾತ್ಮಕ ವ್ಯವಸ್ಥೆಗಳ ಪೈಕಿ ಕೊನೆಯಲ್ಲಿ ರೂಪುಗೊಂಡದ್ದೇ ಜೀವಗೋಳ. ಇದು ಇತರ ಎಲ್ಲಕ್ಕಿಂತ ವಿಶಿಷ್ಟವಾದದ್ದು ಮತ್ತು ಅತ್ಯಧಿಕ ಅಂತರಕ್ರಿಯೆಯುಳ್ಳದ್ದು. ಸೌರವ್ಯೂಹದ ಇತರ ಗ್ರಹ ಉಪಗ್ರಹಗಳಿಗೂ ತಿರುಳು, ಕವಚ ಮಾತ್ರವೇ ಅಲ್ಲ ಕೆಲವಕ್ಕೆ ತೊಗಟೆ ಮತ್ತು ವಾಯುಮಂಡಲ ಕೂಡ ಇವೆ. ಶನಿಯ ಅತಿ ದೊಡ್ಡ ಉಪಗ್ರಹವಾದ ಟೈಟಾನಿನಲ್ಲಿ ದ್ರವ ಮೀಥೇನಿನ ಸಮುದ್ರಗಳೇ ಇರಬಹುದು. ಮಂಗಳದಿಂದ ಆಚೆಗಿನ ಸದಸ್ಯ ಕಾಯಗಳಲ್ಲಿ ಬರ್ಫಾಚ್ಛಾದಿತ ಜಲಗೋಳಗಳಿವೆ. ಆದರೆ ಸ್ವಯಂಪುನರುತ್ಥಾನಶೀಲ (ಮ್ಯುಟೇಷನ್) ಮತ್ತು ತಳಿಪುನಸ್ಸಂಯೋಜನೆಯಿಂದ ವಿವಿಧ ರೂಪಗಳಾಗಿ ಮೈದಳೆದು ಈ ಬದಲಾವಣೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ಅನುವಂಶಿಕವಾಗಿ ವರ್ಗಾಯಿಸುವ ಸಾಮಥ್ರ್ಯ ಪಡೆದಿವೆ. ಈ ಕ್ರಿಯೆಗಳನ್ನು ಎಸಗಬಲ್ಲ ರಚನೆಗಳನ್ನು ಜೀವಿಗಳು ಅಥವಾ ಜೀವಂತ ರಚನೆಗಳು ಎಂದು ಕರೆಯುತ್ತೇವೆ. ಶಿಲಾ, ಜಲ ಹಾಗೂ ವಾಯು ಎಂಬ ಗೋಳತ್ರಯಗಳ ಜೊತೆ ಭೂಮಿಯ ಮೇಲ್ಮೈಯಲ್ಲಿ ಮತ್ತು ಅದರ ಸಮೀಪದಲ್ಲಿ ಈ ಜೀವಿಗಳ ಸಮಾಕಲನವೇ ಜೀವಿಗೋಳ.

	ಜೀವಿಗೋಳದ ವ್ಯಾಪಕ ವೈವಿಧ್ಯ ಹಾಗೂ ಅಂತರಕ್ರಿಯಾಶೀಲತೆ ಊಹಾತೀತವೆನ್ನಿಸುವಷ್ಟು ಸಮೃದ್ಧವಾಗಿವೆ. ಇದರ ಜೀನ್ ಸಂಚಯದಲ್ಲಿಯ (ಜೀನ್‍ಪೂಲ್) ಭವಿಷ್ಯ ಸಾಧ್ಯತೆಗಳು ದಂಗುಬಡಿಯುವಂತಿವೆ. ಜೀವವಿe್ಞÁನಿಗಳು ಈತನಕ ಸುಮಾರು 1.5 ಮಿಲಿಯನ್ ಪ್ರಾಣಿ ಪ್ರಭೇದಗಳನ್ನೂ 0.5 ಮಿಲಿಯನ್ ಸಸ್ಯ ಪ್ರಬೇಧಗಳನ್ನೂ ವರ್ಗೀಕರಿಸಿರುವರು. ವಾರ್ಷಿಕವಾಗಿ ಸುಮಾರು 10,000 ನೂತನ ಪ್ರಭೇದಗಳ ಆವಿಷ್ಕಾರ ಹಾಗೂ ನಾಮಕರಣ ನಡೆಯುತ್ತಿದೆ. ಜೀವಿ ವಿಕಾಸವಿಲ್ಲಿ ನಿರಂತರ ಪ್ರಕ್ರಿಯೆ. ಜೀವಿಗೋಳದ ಸುದೀರ್ಘ ಇತಿಹಾಸದಲ್ಲಿ ಜೀವದ ಉಗಮ ಹಾಗೂ ಆರಂಭದಲ್ಲೇ ಅದರ ವಿಭೇಧೀಕರಣ (ಡೈವರ್ಸಿಫಿಕೇಶನ್) ತಲೆದೋರಿದ್ದು ಅತ್ಯಂತ ಮುಖ್ಯಘಟನೆ: ಭೂಮಿಯ ಮೇಲ್ಮೈ ಜೊತೆ ಜೀವಿಗೋಳೀಯ ಮೊದಲ ಚಟುವಟಿಕೆಗಳವು. ಇತ್ತ ಜೀವಿಯ ಉಗಮ ವಿಕಾಸಗಳಿಗೆ ಜೀವಗೋಳ ಕಾರಣವಾದಂತೆಯೇ ಜೀವಿಗೋಳದ ಸತತ ಪರಿವರ್ತನೆಗೆ ಜೀವಿಯೂ ಕಾರಣ ಎಂಬುದು ಸ್ಪಷ್ಟ. ಫಲಿತಾಂಶವಾಗಿ ಇಂದು ಭೂಮಿಯ ಮೇಲ್ಮೈಯಿಂದ ಸುಮಾರು 10 ಮೀ. ಕೆಳಗಿನ ಮತ್ತು 10 ಕಿಮೀ ಮೇಲಿನ ಪ್ರದೇಶಗಳು ಜೀವಿವಾಸಕ್ಕೆ ಯೋಗ್ಯವಾಗಿವೆ.

	ವಸ್ತುಗಳ ಚಕ್ರೀಕರಣ ಇಲ್ಲಿಯ ನಿರಂತ ಕಾರ್ಯಕಲಾಪ. ಹುಳು, ಇರುವೆ ಮುಂತಾದವು ನೆಲವನ್ನು ಸತತವಾಗಿ ಉತ್ತು ಹಸನುಗೊಳಿಸುತ್ತವೆ. ಈ ನೆಲದ ಮೇಲೆ ಗಿಡಮರ ಬೆಳೆದು ಮತ್ತೆ ಮಣ್ಣು ಆಗುತ್ತವೆ. ಇದು ತೊಳೆದು ಹೋಗಿ ಕಡಲು ಸೇರುತ್ತದೆ. ಕಡಲಿನ ಯಾವುದೋ ಭಾಗದಲ್ಲಿ ಭಾರ ಹೆಚ್ಚಾದಾಗ ಇನ್ನೆಲ್ಲೋ ಭೂಕಂಪನದ ಕಾರಣವಾಗಿ ನೆಲ ಮಟ್ಟವಾಗುತ್ತದೆ. ಪರ್ವತ ಏಳುತ್ತದೆ. ಇವೆಲ್ಲ ಚಟುವಟಿಕೆಗಳಲ್ಲಿ ಹಲವಾರು ಚಕ್ರಗಳನ್ನು ಗುರುತಿಸಬಹುದು. ಪ್ರತಿವರ್ಷವೂ ಜೈವಿಕಕ್ರಿಯೆಗಳ ಕಾರಣವಾಗಿ ವಾಯುಮಂಡಲಕ್ಕೆ ಸುಮಾರು 400,000 ಟನ್ನುಗಳಷ್ಟು ಸಾವಯವ ಬಾಷ್ಪಶೀಲಗಳು ಜಮೆಯಾಗುತ್ತವೆ.

	ಶಿಲಾಶಿಥಿಲೀಕರಣ, ಮಣ್ಣಿನ ಸವೆತ, ನೆಲ ಜಲ ವಾಯುಗಳಲ್ಲಿಯ ರಾಸಾಯನಿಕಗಳ ಪ್ರಮಾಣಗಳಲ್ಲಿ ಏರುಪೇರು ಮುಂತಾದ ನೈಸರ್ಗಿಕವಲ್ಲದ ಕ್ರಿಯೆಗಳಲ್ಲಿ ಜೀವಿಗಳ ಪಾತ್ರ ಗಮನಾರ್ಹವಾಗಿದೆ. ಹೀಗೆ ಜೀವಿಗೋಳ ಭೂಮಿಯ ಉಳಿದ ಮೇಲ್ಮೈಯನ್ನು ಗಾಢವಾಗಿ ಪ್ರಭಾವಿಸುತ್ತದೆ. 

	ಜೀವಿಗೋಳಕ್ಕೆ ಕೊನೆ ಇದೆಯೇ? ಪ್ರಾಯಶಃ ಸೂರ್ಯ ಇನ್ನು 4-5 ಬಿಲಿಯನ್ ವರ್ಷಗಳಲ್ಲಿ ರಕ್ತದೈತ್ಯ ನಕ್ಷತ್ರವಾಗಿ ವ್ಯಾಕೋಚಿಸಿದಾಗ ಕೊನೆ ಬಂದೀತು ಅಥವಾ ಆ ಮೊದಲೇ ಮಾನವನ ಭಸ್ಮಾಸುರ ಪ್ರವೃತ್ತಿಯಿಂದ ಹಠಾತ್‍ನಾಶವೂ ಸಂಭವಿಸಬಹುದು.

9. ಭೌತ ವಿವರಗಳು
	(ಚಿ) ಭೂಮಿಯಿಂದ ಸೌರವ್ಯೂಹದ ಇತರ ಕಾಯಗಳ ದೂರ (ಮಿಲಿಯನ್ ಕಿಮೀ) 
						ಗರಿಷ್ಠ			ಕನಿಷ್ಠ	
	ಚಂದ್ರ		..........		 	 0.4048		 0.3552
	ಶುಕ್ರ		..........			 257.44		 41.12
	ಬುಧ		..........			 219.04		 78.56
	ಮಂಗಳ		..........			 395.2		 54.4
	ಗುರು		..........			 955.2			 579.2 
	ಶನಿ		..........			1636.8		1236.8 
	ಯುರೇನಸ್	..........			3113.6		2550.4
	ನೆಪ್ಚೂನ್		..........			4625.6		4246.4
	ಪ್ಲೂಟೋ 	..........			7209.6		4168

	(b) ಭೂಮಿಯನ್ನು ಕುರಿತ ಸಂಗತಿಗಳು
	ಅಂದಾಜು ಪ್ರಾಯ		..........		ಕನಿಷ್ಠ	4.5 ಬಿಲಿಯನ್ ವರ್ಷಗಳು
	ಮೇಲ್ಮೈ ವಿಸ್ತೀರ್ಣ		..........			510,100,500 ಚ.ಕಿಮೀ.
	ನೆಲ ವಿಸ್ತೀರ್ಣ		..........			148,950,900 ಚ.ಕಿಮೀ.
	ಜಲವಿಸ್ತೀರ್ಣ (ಒಟ್ಟು ವಿಸ್ತೀರ್ಣದ 71%)		361,149,600 ಚ.ಕಿಮೀ.
	ಸಮಭಾಜಕೀಯ ಪರಿಧಿ	..........			 39,843.2 ಕಿಮೀ.
	ಯಾವ್ಯೋತ್ತರ ಪರಿಧಿ	..........			 39,776 ಕಿಮೀ.	 
	ಗಾತ್ರ			..........			673,400,000,000 ಘಕಿಮೀ.	
	ರಾಶಿ			..........			 5.976 ಘಿ 10 ಕೆಜಿ 24	

	ಭೂಮಿ ವಾರ್ಷಿಕವಾಗಿ 15.14 ಮೆಟ್ರಿಕ್ ಟನ್ನುಗಳಷ್ಟು ವಿಶ್ವಧೂಳನ್ನು ಆಕರ್ಷಿಸುತ್ತಿದೆ ಎಂದು ಅಂದಾಜು. 
	ಭೂಮಿಯ ನೆಲಮೇಲ್ಮೈಯ ಔನ್ನತ್ಯತಮ ಬಿಂದು ಮೌಂಟ್ ಎವರೆಸ್ಟ್ 8847.7 ಮೀ.
	ಭೂಮಿಯ ನೆಲಮೇಲ್ಮೈಯ ನಿಮ್ನತಮ ಬಿಂದು ಡೆಡ್ ಸೀತೀರ, ಪ್ಯಾಲಸ್ತೀನ್ ಸಮುದ್ರಮಟ್ಟಕ್ಕಿಂತ 392 ಮೀ ಆಳಕ್ಕಿದೆ. ಸಾಗರದ ಅತ್ಯಂತ ಹೆಚ್ಚಿನ ಆಳ ಮೇರಿಯಾನ ಟ್ರೆಂಚ್, ಫಿಲಿಫೇನ್ಸ್ ಆಚೆಗೆ ಸಮುದ್ರಮಟ್ಟಕ್ಕಿಂತ 11033 ಮೀ ಆಳಕ್ಕಿದೆ. 
	ಸೂರ್ಯನ ಸುತ್ತಲಿನ ಭೂಮಿಯ ಪರಿಭ್ರಮಣಾವಧಿ 365ದಿ 5ಗಂ 48ಮಿ 46ಸೆ
	ಭೂಮಿಯ ಆವರ್ತನಾವಧಿ 23 ಗಂ 56 ಮಿ
	ಕಕ್ಷಾವೇಗ ವೇಗ 106,560 ಕಿಮೀ/ಗಂ
	ಸಮಭಾಜಕ ಪ್ರದೇಶದಲ್ಲಿ ಭೂಮಿಯ ಆವರ್ತನ ವೇಗ 1600 ಕಿಮೀ ಗಿಂತಲೂ ಅಧಿಕ.

(b) ಸೌರ್ಯವ್ಯೂಹದಲ್ಲಿ ಭೂಮಿ

ಬುಧ
ಶುಕ್ರ 
ಭೂಮಿ
ಮಂಗಳ
ಗುರು
ಶನಿ 
ಯುರೇನಸ್
ನೆಪ್ಚೂನ್
ಪ್ಲೂಟೋ

ಸೂರ್ಯನಿಂದ ಗರಿಷ್ಠ ದೂರ (ಮಿಲಿಯನ್ ಕಿಮೀ)
69.7
109
152.1
249.1
815.7
1507
3004
4537
7375

ಸೂರ್ಯನಿಂದ ಕನಿಷ್ಠ ದೂರ (ಮಿಲಿಯನ್ ಕಿಮೀ)
45.9
107.4
147.1
206.7
740.9
1347
2735
4456
4425

ಸೂರ್ಯನಿಂದ ಸರಾಸರಿ ದೂರ (ಮಿಲಿಯನ್ ಕಿಮೀ)
57.9
108.2
149.6
227.9
778.3
1427
2869.6
4496.6
5900

ಸೂರ್ಯನಿಂದ ಸರಾಸರಿ ದೂರ (ಖಗೋಳಮಾನಗಳು)
0.387
0.723
1
1.524
5.203
9.539
19.18
30.06
39.44

ಪರಿಭ್ರವ್ಮಣಾವಧಿ
88 ದಿ
224.7 ದಿ
365.26 ದಿ
687 ದಿ
11.86 ವ
29.46 ವ 
84.01 ವ 
164.8 ವ
247.7 ವ

ಆವರ್ತನಾವಧಿ
59 ದಿ
-243 ದಿ (ವಕ್ರ ಚಲನೆ)
23ಗಂ 56ಮಿ 4ಸೆ
24ಗಂ 37ಮಿ 23ಸೆ
9ಗಂ 50ಮಿ 30ಸೆ
10ಗಂ 14ಮಿ
-11ಗಂ (ವಕ್ರ ಚಲನೆ)
16ಗಂ
6ದಿ 9ಗಂ

ಕಕ್ಷಾವೇಗ (ಕಿಮೀ/ಸೆ)
47.9 
35
29.8
24.1
13.1
9.6
6.8
5.4
4.7

ಅಕ್ಷದ ಬಾಗು
<28(
3(
23(27(
23(.59(
3( 5(
26( 44(
82( 5(
28( 48(
?

ಕ್ರಾಂತಿವೃತ್ತಕ್ಕೆ ಕಕ್ಷೆಯ ಬಾಗು
7(
3.4(
0(
1.9(
1.3(
2.5(
0.8
1.8(
17.2(

ಕಕ್ಷೆಯ ಉತ್ಕೇಂದ್ರತೆ
0.206
0.007
0.017
0.093
0.048
0.056
0.047
0.009
0.25

ಸಮಭಾಜಕೀಯವ್ಯಾಸ (ಕಿಮೀ)
4880
12104
12756
6787
142800
120000
51800
49500
6000 (?)

ರಾಶಿ (ಭೂಮಿ=1)
0.055
0.815
1
0.108
317.9
95.2
14.6
17.2
0.1 (?)

ಘನಗಾತ್ರ (ಭೂಮಿ=1)
0.06
0.88
1
0.15
1316
755
67
57
0.1 (?)

ಸಾಂದ್ರತೆ (ನೀರು=1)
5.4
5.2
5.5
3.9
1.3
0.7
1.2
1.7
?

ಚಪ್ಪಟೆತನ
0
0
0.003
0.009
0.06
0.1
0.06
0.02
?

ವಾಯುಮಂಡಲ (ಪ್ರಧಾನ ಘಟಕಗಳು)
ಇಲ್ಲ
ಕಾರ್ಬನ್ ಡೈ ಆಕ್ಸೈಡ್
ನೈಟ್ರೋಜನ್ ಆಕ್ಸಿಜ ನ್
ಕಾರ್ಬ ನ್ ಡೈ ಆಕ್ಸೈಡ್ (ಆರ್ಗಾ ನ್ ?)
ಹೈಡ್ರೊಜನ್ ಹೀಲಿ ಯಮ್
ಹೈಡ್ರೊಜನ್ ಹೀಲಿ ಯಮ್
ಹೈಡ್ರೊಜ ನ್ ಹೀಲಿ ಯಮ್ ಮೀಥೆನ್
ಹೈಡ್ರೊಜನ್ ಹೀಲಿ ಯಮ್ ಮೀಥೆನ್
ಏನನ್ನೂ ಪತ್ತೆ ಹಚ್ಚಲಾಗಿಲ್ಲ

ಮೇಲ್ಮೈ ಗುರುತ್ವ (ಭೂಮಿ=1)
0.37
0.88
1
0.38
2.64
1.15
1.17
1.18
?

ಗ್ರಹದಿಂದ ಕಾಣುವಂತೆ ಸೂರ್ಯನ ಸರಾಸರಿ ತೋರ್ಕೆವ್ಯಾಸ
1( 22( 40(
44(15(
31(51(
21(
6(9(
3(22(
1(41(
1(4(
49(

e್ಞÁತ ಉಪಗ್ರಹಗಳು
0
0
1
2
17, ಬಳೆ ಗಳು 
14, ಬಳೆ ಗಳು
6, ಬಳೆಗಳು
2
0

(ಜ) ಭೂಖಂಡಗಳು

ವಿಸ್ತೀರ್ಣ ಚ ಕಿಮೀ
ಮಾಧ್ಯ ಔನ್ನತ್ಯ ಮೀ
ಔನ್ನತ್ಯತಮ ಬಿಂದು ಮೀ
ನಿಮ್ನತಮ ಬಿಂದು ಮೀ
ದಾಖಲಿತ ಅತ್ಯಧಿಕ ಉಷ್ಣತೆ (ಈ
ದಾಖಲಿತ ಕನಿಷ್ಠತಮ ಉಷ್ಣತೆ (ಈ

ಆಫ್ರಿಕ
30,300,410
579.12
ಕಿಲಿಮಂಜಾರೋ ಶಿಖರ, ಟ್ಯಾಂಗನೀಕ 5894.83
ಕ್ವಟ್ಟಾರಾ ಇಳಿತ, ಈಜಿಪ್ಟ್ ಸಮುದ್ರಮಟ್ಟಕ್ಕೆ 133ಮೀ ಆಳಕ್ಕೆ
ಎಲ್. ಅಜೀಜಿóಯ, ಲಿಬ್ಯ, 136.4
ಸೆಮ್‍ರೀರ್ ಮೊರಾಕೊ-11.4

ಅಂಟಾರ್ಕ್‍ಟಿಕ
13,727,000
1828.8
ಮಾರ್ಖಾಮ್ ಶಿಖರ
4602.48
ಸಮುದ್ರ ಮಟ್ಟ
ಹೋಪ್ ಬೇ, ಗ್ರಹ್ಯಾಮ್ ಲ್ಯಾಂಡ್ 50
ವೊಸ್ಟಾಕ್ -125.3

ಏಷ್ಯ
48,394,150
914.4
ಎವರೆಸ್ಟ್ ಶಿಖರ, ನೇಪಾಲ-ತಿಬೆಟ್ 4602.48
ಡೆಡ್ ಸೀ, ಪ್ಯಾಲಸ್ತೀನ್ ಸಮುದ್ರಮಟ್ಟಕ್ಕೆ 392ಮೀ ಆಳಕ್ಕೆ
ಜಕೋಬಾಬಾದ್, ಪಾಕಿಸ್ತಾನ 126
ವಖ್ಯೊಯಾನ್ಸ್ಕ್ ಸೈಬೀರಿಯ -89.9

ಆಸ್ಟ್ರೇಲಿಯ
7,695,099,79
304.8
ಕೋಸಿಯುಸ್ಕೋ, ನ್ಯೂ ಸೌತ್‍ವೇಲ್ಸ್ 2230
ಐರ್ ಸರೋವರ, ದಕ್ಷಿಣ ಆಸ್ಟ್ರೇಲಿಯ ಸಮುದ್ರ ಮಟ್ಟಕ್ಕೆ 11.88ಮೀ ಆಳಕ್ಕೆ
ಕ್ಲೋನ್‍ಕರಿ, ಕ್ವೀನ್ಸ್‍ಲೆಂಡ್ 127.5
ಕಿಯಾಂಡ್ರ, ನ್ಯೂ ಸೌತ್‍ವೇಲ್ಸ್ 5

ಯೂರೋಪ್
5,400,150
298.7
ಎಲ್‍ಬ್ರುಸ್ ಶಿಖರ ಸೋವಿಯೆತ್ ದೇಶ 5833.31
ಕ್ಯಾಸ್ಪಿಯನ್ ಸಮುದ್ರ, ಸೋವಿಯೆತ್ ದೇಶ ಸಮುದ್ರಮಟ್ಟಕ್ಕೆ 28ಮೀ ಆಳಕ್ಕೆ
ಸೆವಿಲ್ಲೆ, ಸ್ಪೇನ್ 124
ಊಸ್ಟ್-ಷ್ಯೂಗೊರ್, ಸೋವಿಯತ್ ದೇಶ -67

ಉತ್ತರ ಅಮೆರಿಕ
24,436,650
609.6
ಮ್ಯಾಕ್‍ಕೆನ್ಲಿ ಶಿಖರ, ಅಲಾಸ್ಕ 6193.53
ಡೆತ್ ವ್ಯಾಲಿ, ಕ್ಯಾಲಿಪೋರ್ನಿಯ, ಸಮುದ್ರಮಟ್ಟಕ್ಕೆ 85.34ಮೀ ಆಳಕ್ಕೆ
ಡೆತ್ ವ್ಯಾಲಿ, ಕ್ಯಾಲಿಪೋರ್ನಿಯ 133.9
ಸ್ನ್ಯಾಗ್, ಯೂಕಾಸ್ 81

ದಕ್ಷಿಣ ಅಮೆರಿಕ
17,767,400
548.64
ಅಕನ್‍ಕಾಗ್ವ ಶಿಖರ, ಅರ್ಜೆಂಟೀನ 7021.98
ರೀಯೋ ನೆಗ್ರೋ ಆರ್ಜೆಂಟೀನ, ಸಮುದ್ರ ಮಟ್ಟಕ್ಕೆ 29.97ಮೀ ಆಳಕ್ಕೆ
ರಿವಾಡಾವೀಯ ಆರ್ಜೆಂಟೀನ 120
ಕೊಲೋನಿಯ ಸಾರ್ಮಿಂಟೋ ಆರ್ಜೆಂಟೀನ -27

(e) ಭೂಮಿಯ ಮೇಲಿನ ಉನ್ನತ ಪರ್ವತಶಿಖರಗಳು (ಮೀಟರುಗಳಲ್ಲಿ)

ಮೌಂಟ್ ಎವರೆಸ್ಟ್, ನೇಪಾಲ-ತಿಬೆಟ್				.........		8847.73
ಮೌಂಟ್ ಗಾಡ್ವಿನ್ ಆಸ್ಟೆನ್ (ಞ-2), ಭಾರತ			.........		8610.6
ಕಾಂಚನಗಂಗಾ, ನೇಪಾಲ-ಭಾರತ				.........		8578.9
ಮೌಂಟ್ ಮಕಾಲೂ, ತಿಬೆಟ್-ನೇಪಾಲ			.........		8481.66
ಧವಳಗಿರಿ, ನೇಪಾಲ					.........		8221.98
ನಂಗ ಪರ್ವತ, ಭಾರತ					.........		8125.96
ಅನ್ನಪೂರ್ಣ, ನೇಪಾಲ					.........		8078.41
ಗ್ಯಾಷೆರ್‍ಬ್ರಮ್, ಭಾರತ					.........		8072.01
ಗೋನೈನ್‍ಥಾನ್, ನೇಪಾಲ					.........		8013.49
ನಂದಾದೇವಿ, ಭಾರತ					.........		7816.59		
ರಾಕಾಪೋಶಿ, ಭಾರತ					.........		7787.64
ಮೌಂಟ್ ಕಾಮೆಟ್, ಭಾರತ-ತಿಬೆಟ್				.........		7756.24	
ನಂಚಾ ಬಾರ್ವ, ತಿಬೆಟ್					.........		7756.24
ಗುರ್ಲ ಮಾಂಧಾತ, ತಿಬೆಟ್					.........		7728.2
ಉಲ್ಗ್ ಮುಸ್ಟಾಗ್, ತಿಬೆಟ್					.........		7720.88	
ಆಮ್ನೆ ಮಂಚಿನ್, ಚೀನ					.........		7620	
ಮಿನ್ಯ ಕೊಂಕ, ಚೀನ					.........		7590.43
ಸ್ಟಾಲಿನ್ ಪೀಕ್, ಸೋವಿಯತ್ ದೇಶ				.........		7494.72	
ಪೊಬಿಡೀ ಪೀಕ್, ಸೋವಿಯತ್ ದೇಶ-ಸಿಕಿಯಾಂಗ್		.........		7439.25	
ಮುeóïಟಾಗ್, ಸಿಂಕಿಯಾಂಗ್				.........		7432.85
ತಿರೀಷ್ ಮಿರ್, ಪಾಕಿಸ್ತಾನ					.........		7416.36
ಮೌಂಟ್ ಚುಮಲ್ ಹಾರಿ, ಭೂತಾನ-ತಿಬೆಟ್			.........		7193.89	
ಖಾನ್ ತೆಂಗ್ರಿ, ಸೋವಿಯತ್ ದೇಶ				.........		7193.28
ಲೆನಿನ್ ಪೀಕ್, ಸೋವಿಯತ್ ದೇಶ				.........		7134.14
ಅಕನ್‍ಕಾಗ್ವ, ಆರ್ಜೆಂಟೀನ					.........		7021.98
ಅಂಕೊಹ್ಯೂಮ, ಬೊಲಿವಿಯ				.........		7014.05
ಓಯೋಸ್ ಡೆಲ್ ಸಾಲಾಡೋ, ಆರ್ಜೆಂಟೀನ			.........		6869.88
ಪಿಸೀಸ್, ಆರ್ಜೆಂಟೀನ					.........		6778.14
ಹ್ಯೂಯಾಸ್‍ಕಾರನ್, ಪೆರು					.........		6768.08
ಲ್ಯೂಲೈಲಾಕೋ, ಆರ್ಜೆಂಟೀನ-ಚಿಲಿ				.........		6722.97
ಮರ್ಸಿಡಾರಿಯೊ, ಆರ್ಜೆಂಟೀನ				.........		6668.41
ಯೇರುಪಾಜೌó,  ಪೆರು					.........		6632.14
ಇನ್‍ಕಾಹ್ಯುಯಾಸಿ, ಆರ್ಜೆಂಟೀನ-ಚಿಲಿ				.........		6620.25
ಟುಪುನ್‍ಗಾಟೋ, ಚಿಲಿ					.........		6548.32
ಸಜಾಮಾ ಜ್ವಾಲಾಮುಖಿ, ಬೊಲಿವಿಯ				.........		6519.67	
ಮೌಂಟ್ ಇಲ್ಲಾಂಪು, ಬೊಲಿವಿಯ				.........		6483.09
ಮೌಂಟ್ ಇಲ್ಲಿಮಾನಿ, ಬೊಲಿವಿಯ				.........		6456.88
ಜಿಂಬರಾಸೋ, ಈಕ್ವಡಾರ್					.........		6266.99
ಮ್ಯಾಕ್‍ಕೆನ್ಲೀ, ಅಲಾಸ್ಕ					.........		6193.53
ಕೈಲಾಸ್, ತಿಬೆಟ್						.........		6187.44

(ಜಿ) ಪ್ರಮುಖ ಸಾಗರ ಮತ್ತು ಸಮುದ್ರಗಳು					

ವಿಸ್ತೀರ್ಣ ಚ.ಕಿಮೀ.
ಸರಾಸರಿ ಆಳಮೀ.
ಅತ್ಯಧಿಕ ಆಳ ಮೀ.

ಫೆಸಿಫಿಕ್ ಸಾಗರ
165,723,740
4279.39
11,033.15

ಅಟ್ಲಾಂಟಿಕ್ ಸಾಗರ
81,662,700
3925.82
9187.58

ಹಿಂದೂ ಸಾಗರ
73,426,500
3962.4
7000.64

ಆರ್ಕ್‍ಟಿಕ್ ಸಾಗರ
14,352,744
1280.16
5440.68

ಮೆಡಿಟರೇನಿಯನ್ ಸಮುದ್ರ
2,965,550
1371.6
4399.78

ದಕ್ಷಿಣ ಚೀನ ಸಮುದ್ರ
2,318,050
1645.92
5015.78

ಬೇರಿಂಗ್ ಸಮುದ್ರ
2,274,020
507.49
4091.02

ಕ್ಯಾರಿಬಿಯನ್ ಸಮುದ್ರ
1,942,500
2560.32
7241.74

ಮೆಕ್ಸಿಕೋ ಖಾರಿ
1,813,000
1432.56
3787.44

ಓಕ್ಹಾಟ್ಸ್ಕ್ ಸಮುದ್ರ
1,507,380
914.4
3846.88

ಪೂರ್ವ ಚೀನ ಸಮುದ್ರ
1,243,200
185.92
3200.4

ಯೆಲ್ಲೋ ಸಮುದ್ರ
1,243,200
48.76
106.07

ಹಡ್ಸನ್ ಕೊಲ್ಲಿ
1,222,480
134.11
457.2

ಜಪಾನ್ ಸಮುದ್ರ
1,048,950
1473.7
3108.96

ನಾರ್ತ್ ಸೀ
572,390
54.86
695.3

ರೆಡ್ ಸೀ
461,020
454.12
2211.09

ಬ್ಲ್ಯಾಕ್ ಸೀ
436,415
1310.64
2561.97

ಬಾಲ್ಟಿಕ್ ಸಮುದ್ರ
435,120
6767.36
396.24

(g) ಅತಿ ಉದ್ದನೆಯ ನದಿಗಳು (ಅವರೋಹೀ ಉದ್ದ ಕ್ರಮದಲ್ಲಿ ಅಳವಡಿಸಿದೆ)
ನದಿಗಳು				 			ಉದ್ದ ಮೀ
ನೈಲ್, ಆಫ್ರಿಕ				.........		6632
ಆಮೆeóÁನ್, ದಕ್ಷಿಣ ಅಮೆರಿಕ		........		6240
ಮಿಸಿಸಿಪಿ-ಮಿಸೂರಿ, ಅಸಂಸಂ		.........		6016
ಇರ್ಟಿಷ್, ಸೋವಿಯತ್ ದೇಶ		.........		5120
ಯಾಂಗ್‍ಟ್ಸಿ, ಚೀನ				.........		4960
ಆಮೂರ್, ಏಷ್ಯ				.........		4640
ಕಾಂಗೋ, ಆಫ್ರಿಕ				.........		4348.8
ಹ್ವಾಂಗ್ ಹೋ (ಯೆಲ್ಲೊ), ಚೀನ		.........		4320
ಲೀಸ್, ಸೋವಿಯತ್ ದೇಶ		.	........		4232
ಮೆಕೆನ್ಜೀ, ಕೆನಡ				.........		4216
ಮೆಕಾಂಗ್, ಏಷ್ಯ				.........		4160
ನೈಜûರ್, ಆಫ್ರಿಕ				.........		4160
ಯೆನಿನ್ಸೆ., ಸೋವಿಯತ್ ದೇಶ		.........		3776
ಮರ್ರೇ-ಡಾರ್ಲಿಂಗ್, ಆಸ್ಟ್ರೇಲಿಯ		.........		3696
ವೋಲ್ಗ, ಸೋವಿಯತ್ ದೇಶ			.........		3664
ಮಡೀರ, ದಕ್ಷಿಣ ಅಮೆರಿಕ			.........		3360
ಪಾರನ, ದಕ್ಷಿಣ ಅಮೆರಿಕ			.........		2050
ಸಿಂಧೂ, ಏಷ್ಯ				.........		3168
ಯೂಕಾನ್, ಅಲಾಸ್ಕ			.........		3166
ಸೇಂಟ್ ಲಾರೆನ್ಸ್, ಕೆನಡ			.........		3112
ರೀಯೋ ಗ್ರಾಂಡ, ಅಸಂಸಂ			.........		3016
ಪೂರಸ್, ದಕ್ಷಿಣ ಅಮೆರಿಕ			.........		2960
ಬ್ರಹ್ಮಪುತ್ರ, ಏಷ್ಯ				.........		2880
ಓರಿನೊಕೋ, ದಕ್ಷಿಣ ಅಮೆರಿಕ		.........		2880
ಸಾವೋ ಫ್ರಾನ್ಸಿಸ್ಕೊ, ದಕ್ಷಿಣ ಅಮೆರಿಕ		.........		2880
ಡಾನ್ಯೂಬ್, ಯೂರೋಪ್			.........		2832
ಸಾಲ್ವೀನ್, ಬರ್ಮ-ಚೀನ			.........		2800
ಯೂಫ್ರೆಟೀಸ್, ಏಷ್ಯ			.........		2720

	(h) ಪ್ರಮುಖ ಸರೋವರಗಳು (ವಿಸ್ತೀರ್ಣ ಚಕಿಮೀಗಳಲ್ಲಿ)		
ಸರೋವರ						ವಿಸ್ತೀರ್ಣ
ಕ್ಯಾಸ್ಪಿಯನ್ ಸಮುದ್ರ, ಸೋವಿಯತ್ ದೇಶ-ಇರಾನ್		.........	440,300
ಸುಪೀರಿಯರ್, ಅಸಂಸಂ-ಕೆನಡ				.........	82,413.8
ವಿಕ್ಟೋರಿಯ, ಈಸ್ಟ್ ಸೆಂಟ್ರಲ್ ಆಫ್ರಿಕ				.........	67,858
ಆರಲ್, ಸೋವಿಯತ್ ದೇಶ					.........	63,196
ಹ್ಯೂರನ್, ಅಸಂಸಂ-ಕೆನಡ					.........	59,595.9
ಮಿಷಿಗನ್, ಅಸಂಸಂ.					.........	58,016
ನ್ಯಾಸಾ, ಈಸ್ಟ್ ಸೆಂಟ್ರಲ್ ಆಫ್ರಿಕ				.........	36,778
ತ್ಯಾಂಗನೀಕ, ಈಸ್ಟ್ ಸೆಂಟ್ರಲ್ ಆಫ್ರಿಕ				.........	32,893
ಗ್ರೇಟ್ ಬೇರ್, ಕೆನಡ					.........	30,199.4
ಬೇಕಾಲ್, ಸೋವಿಯತ್ ದೇಶ				.........	29,992.2
ಗ್ರೇಟ್ ಸ್ಲೇವ್, ಕೆನಡ					.........	28,930.3
ಐರಿ, ಅಸಂಸಂ-ಕೆನಡ					.........	25,744.6
ವಿನ್ನಿಪೆಗ್, ಕೆನಡ						.........	24,340.9
ಚಾಡ್, ನಾರ್ತ್ ಸೆಂಟ್ರಲ್ ಆಫ್ರಿಕ				.........	20,720
ಆಂಟೇರಿಯೊ, ಅಸಂಸಂ-ಕೆನಡ				.........	19,528.6
ಬಾಲ್ಕಾಷ್, ಸೋವಿಯತ್ ದೇಶ				.........	18,259.9
ಲಾಡೋಗ್, ಸೋವಿಯತ್ ದೇಶ				.........	18,130
ಓನೇಗ, ಸೋವಿಯತ್ ದೇಶ					.........	9,842
ಐರ್, ಆಸ್ಟ್ರೇಲಿಯ						.........	9,583
ರೂಡಾಲ್ಫ್, ಕೀನ್ಯ						.........	9,065
ಟಿಟಿಕಾಕ, ಪೆರು-ಬೊಲಿವಿಯ				.........	8,288
ಆಥಬಾಸ್ಕ, ಕೆನಡ						.........	7,920.2
ನಿಕರಾಗ್ವ, ನಿಕರಾಗ್ವ						.........	7,770
ರೇನ್‍ಡೀರ್, ಕೆನಡ						.........	6,319.6
ಟಾರೆನ್ಸ್, ಆಸ್ಟ್ರೇಲಿಯ					.........	6,216
ಕೋಕೋ ನಾರ್, ಚೀನ					.........	5,957
ಇಸಿಕ್ ಕುಲ್, ಸೋವಿಯತ್ ದೇಶ				.........	5,894.8
	ಪಾನೆರ್ನ್, ಸ್ವೀಡನ್	.........	5.568.5
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ